ಕನ್ನಡ ಚಿತ್ರರಂಗದಲ್ಲಿ ಸಂಚಲನ, ತಲ್ಲಣ ಎಲ್ಲವನ್ನೂ ಸೃಷ್ಟಿಸಿದ್ದ ಶೃತಿ ಹರಿಹರನ್ ಆರೋಪ ಈಗ ತಣ್ಣಗಾಗಿದೆ. ಅಧಿಕೃತವಾಗಿ. ಅರ್ಜುನ್ ಸರ್ಜಾ ನನ್ನನ್ನು ರೂಮಿಗೆ ಕರೆದಿದ್ದರು. ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಕಿರುಕುಳ ನೀಡಿದ್ದರು. ನಿನ್ನನ್ನೇ ನನ್ನ ರೂಮಿಗೆ ಬರುವಂತೆ ಮಾಡುತ್ತೇನೆ ಎಂದಿದ್ದರು ಎಂದು ಶೃತಿ ಹರಿಹರನ್ ಆರೋಪ ಮಾಡಿದ್ದರು. ನಂತರ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.
ಅರ್ಜುನ್ ಸರ್ಜಾ ಕರ್ನಾಟಕ ಅಷ್ಟೇ ಅಲ್ಲದೆ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸ್ಟಾರ್ ನಟ. ಹಿಂದಿ, ಮಲಯಾಳಂನಲ್ಲೂ ಖ್ಯಾತ ನಟ. ಹೀಗಾಗಿ ಸಹಜವಾಗಿಯೇ ಪ್ರಕರಣ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಪ್ರಕರಣ ಫಿಲಂ ಚೇಂಬರ್ ಮೆಟ್ಟಿಲೇರಿ ಅಂಬರೀಷ್ ನೇತೃತ್ವದಲ್ಲಿ ಸಂಧಾನದ ಪ್ರಕ್ರಿಯೆಯೂ ನಡೆದಿತ್ತು. ವಿವಾದವನ್ನು ನ್ಯಾಯಾಲಯದಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುತ್ತೇನೆ. ನನ್ನ ಮೇಲಿನ ಕಳಂಕವನ್ನು ಕೋರ್ಟಿನಲ್ಲೇ ಎದುರಿಸುತ್ತೇನೆ ಎಂದಿದ್ದರು ಅರ್ಜುನ್ ಸರ್ಜಾ. ಇತ್ತೀಚೆಗೆ ಪೊಲೀಸರು ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದರು. ತನಿಖೆ, ವಿಚಾರಣೆ ವೇಳೆ ಶೃತಿ ಹರಿಹರನ್ ತಮ್ಮ ಆರೋಪಕ್ಕೆ ಯಾವುದೇ ಪೂರಕ ಸಾಕ್ಷ್ಯ ಒದಗಿಸುವಲ್ಲಿ ವಿಫಲರಾಗಿದ್ದರು. ಬಿ ರಿಪೋರ್ಟ್‍ನ್ನು ಕೋರ್ಟಿಗೆ ಸಲ್ಲಿಸಿದ ನಂತರ ಕೋರ್ಟಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಕಾಲಾವಕಾಶ ನೀಡಲಾಗಿತ್ತು.
ಕೋರ್ಟ್ ನೀಡಿದ್ದ ಕಾಲಾವಕಾಶವೂ ಮುಗಿದು ಶೃತಿ ಹರಿಹರನ್ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಅರ್ಜುನ್ ಸರ್ಜಾ ನ್ಯಾಯಾಲಯದಲ್ಲಿಯೇ ಕಳಂಕ ಮುಕ್ತರಾಗಿದ್ದಾರೆ.