ಕಿರಿಕ್ ಪಾರ್ಟಿಯಿಂದ ಬೆಳ್ಳಿತೆರೆಗೆ ಬಂದ ರಶ್ಮಿಕಾ ಮಂದಣ್ಣ, ಕನ್ನಡದಲ್ಲಿ ನಟಿಸಿದ್ದು 5 ಸಿನಿಮಾ. ತೆಲುಗಿನಲ್ಲಿ 7 ಹಾಗೂ ತಮಿಳಿನಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ ನಟಿಸಿರುವುದು 13 ಸಿನಿಮಾ. ಕೈಲಿ ಹಿಂದಿಯ 2 ಹಾಗೂ ತೆಲುಗಿನ 2 ಚಿತ್ರಗಳಿವೆ. ಆದರೆ ಆಕೆಯೀಗ ದ.ಭಾರತದ ಟಾಪ್ 5 ನಟಿಯರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ಅವರ ಸಂಭಾವನೆ 3 ಕೋಟಿ ದಾಟಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಗೀತ ಗೋವಿಂದಂ ಹಿಟ್ ಆದಾಗಲೂ ಇಂತಹುದೇ ಸುದ್ದಿ ಹರಿದಾಡಿತ್ತು. ಅದೇ ವೇಳೆ ರಶ್ಮಿಕಾ ಮನೆ ಮೇಲೆ ಐಟಿ ರೇಡ್ ಆಗಿತ್ತು. ಆದರೆ ಅಷ್ಟು ದುಬಾರಿ ಸಂಭಾವನೆಯನ್ನು ರಶ್ಮಿಕಾ ನಿರಾಕರಿಸಿದ್ದರು.
ಈಗ ಪುಷ್ಪ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಹಿಂದೆ ಸರಿಲೇರು ನೀಕೆವ್ವರು ಚಿತ್ರವೂ ಹಿಟ್ ಆಗಿತ್ತು. ಅತ್ತ ತಮಿಳಿನಲ್ಲಿ ಸುಲ್ತಾನ್ ಹಿಟ್ ಆಗಿತ್ತು. ಇದೆಲ್ಲದರಿಂದಾಗಿ ರಶ್ಮಿಕಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಇದೆ.
ಸದ್ಯಕ್ಕೆ ದ.ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವವರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರೋದು ನಯನತಾರಾ. ಅವರ ಸಂಭಾವನೆ 5 ಕೋಟಿ ದಾಟಿದೆ. ಉಳಿದಂತೆ ಅನುಷ್ಕಾ ಶೆಟ್ಟಿ ರೇಸ್ನಲ್ಲಿದ್ದರೂ ಅವರು ರೆಗ್ಯುಲರ್ ಆಗಿ ನಟಿಸುತ್ತಿಲ್ಲ. ಕಾಜಲ್ ಅಗರವಾಲ್ ಮದುವೆಯಾಗಿದ್ದಾರೆ. ತಮನ್ನಾ ಭಾಟಿಯಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ, ಪೂಜಾ ಹೆಗಡೆ ರೇಸ್ನಲ್ಲಿದ್ದಾರೆ. ಸದ್ಯಕ್ಕೆ ತೆಲುಗಿನ ಮಟ್ಟಿಗೆ ಪೂಜಾ ಹೆಗಡೆ ಮತ್ತು ರಶ್ಮಿಕಾ ಮಂದಣ್ಣ ನಡುವೆ ಸಂಭಾವನೆ ವಿಚಾರದಲ್ಲಿ ಪೈಪೋಟಿ ಇದೆ.