ಜೇಮ್ಸ್ ಚಿತ್ರದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. ಪುನೀತ್ ಇಲ್ಲದ ನೋವಿನಲ್ಲೇ ಚಿತ್ರತಂಡದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬ. ಆ ದಿನವೇ ಸಿನಿಮಾ ತೆರೆಗೆ ತರಲು ಪ್ರಯತ್ನಿಸುತ್ತಿದೆ ಚಿತ್ರತಂಡ. ಆದರೆ ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಮಾಡೋದು ಯಾರು?
ಶಿವಣ್ಣ ಅವರಿಂದ ಡಬ್ಬಿಂಗ್ ಮಾಡಿಸ್ತಾರಂತೆ ಎಂಬ ಸುದ್ದಿ ಹರಡಿದ್ದು ನಿಜವಾದರೂ, ಚಿತ್ರತಂಡ ಬೇರೆಯದೇ ಪ್ಲಾನ್‍ನಲ್ಲಿದೆ. ಪುನೀತ್ ಅವರಿಂದಲೇ ಡಬ್ ಮಾಡಿಸುವ ಯೋಜನೆ ಅದು.
ನೂತನ ತಂತ್ರಜ್ಞಾನದಲ್ಲಿ ಪುನೀತ್ ಅವರ ಧ್ವನಿಯನ್ನು ಸಾಫ್ಟ್‍ವೇರ್‍ವೊಂದಕ್ಕೆ ಫೀಡ್ ಮಾಡಿ ರೆಡಿ ಮಾಡೋದು. ನಂತರ ಆ ಸಾಫ್ಟ್‍ವೇರ್ ಮೂಲಕವೇ ಜೇಮ್ಸ್ ಡೈಲಾಗ್ ಹೇಳಿಸೋ ಯೋಜನೆ ಅದು. ಟೆಕ್ನಿಕಲಿ ಇದು ಅಸಾಧ್ಯವಲ್ಲ. ಆದರೆ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದ್ರ ಬಗ್ಗೆ ಚಿತ್ರತಂಡಕ್ಕಿನ್ನೂ ಗ್ಯಾರಂಟಿ ಇಲ್ಲ.
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಟ್ರೇಲರ್‍ನ್ನು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡೋ ಪ್ಲಾನ್ ಚಿತ್ರತಂಡಕ್ಕಿದೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿ. ಶ್ರೀಕಾಂತ್, ಅನು ಪ್ರಭಾಕರ್, ಶರತ್ ಕುಮಾರ್, ರಂಗಾಯಣ ರಘು, ಚಿಕ್ಕಣ್ಣ, ಸಾಧು ಕೋಕಿಲ ಸೇರಿದಂತೆ ಬೃಹತ್ ತಾರಾಬಳಗ ಹೊಂದಿರೋ ಚಿತ್ರವಿದು. ಅಪ್ಪು ಮಾತ್ರ ಈಗಿಲ್ಲ.