ಬೀರ್‍ಬಲ್ ಚಿತ್ರವನ್ನು ನೋಡಿದವರು ಶ್ರೀನಿಯನ್ನು ಮರೆಯಲ್ಲ. ಆದರೆ ಅದೇ ಚಿತ್ರ ಈಗ ಶ್ರೀನಿಯನ್ನು ಮತ್ತೆ ಆರ್‍ಜೆಯನ್ನಾಗಿಸುತ್ತಿರೋದು ಸುಳ್ಳಲ್ಲ. ಪ್ರಶಾಂತ್ ಸಾಗರ್ ಅಟ್ಲುರಿ ಎಂಬ ನಿರ್ದೇಶಕರ ಹೊಸ ಚಿತ್ರದಲ್ಲಿ ಶ್ರೀನಿ ಮತ್ತೆ ಆರ್‍ಜೆಯಾಗುತ್ತಿದ್ದಾರೆ. ಅದಕ್ಕೆ ಕಾರಣ ಬೀರ್‍ಬಲ್ ಅನ್ನೋದು ವಿಶೇಷ.
ಬೀರ್‍ಬಲ್ ಸಿನಿಮಾ ತೆಲುಗಿಗೆ ತಿಮ್ಮರಸು ಹೆಸರಲ್ಲಿ ರೀಮೇಕ್ ಆಗಿತ್ತು. ಆ ತಿಮ್ಮರಸು ನಿರ್ಮಾಪಕರಿಗೆ ಅಟ್ಲುರಿ ಪರಿಚಯ. ಅಲ್ಲದೆ ಅವರಿಗೆ ಕನ್ನಡದಲ್ಲಿ ನನ್ನ ಜೊತೆ ಸಿನಿಮಾ ಮಾಡೋ ಆಸೆಯಿತ್ತು. ಹೀಗಾಗಿ ಈ ಹೊಸ ಸಿನಿಮಾ ಶುರುವಾಯ್ತು ಎನ್ನುವ ಶ್ರೀನಿ, ಆರ್‍ಜೆಯಾಗಿಯೇ ವೃತ್ತಿ ಜೀವನ ಆರಂಭಿಸಿದ್ದವರು. ಶ್ರೀನಿವಾಸ ಕಲ್ಯಾಣ ಚಿತ್ರದಿಂದ ಹೀರೋ ಆದ ಮೇಲೆ ಆರ್‍ಜೆ ಕೆಲಸ ಬಿಟ್ಟಿದ್ದ ಶ್ರೀನಿಗೆ ಈಗ ಮತ್ತೆ ಆರ್‍ಜೆಯಾಗಿ ನಟಿಸುತ್ತಿರೋದಕ್ಕೆ ಸಂತೋಷವಿದೆ.
ಇನ್ನು ನಿರ್ದೇಶಕ ಅಟ್ಲುರಿ ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರ ಜೊತೆ ಕೆಲಸ ಮಾಡಿದ್ದವರಂತೆ. ಅಲ್ಲದೆ ತೆಲುಗಿನಲ್ಲಿ ಮಧ ಅನ್ನೋ ಸಿನಿಮಾಗೆ ಕಥೆ ಬರೆದಿದ್ದರಂತೆ. ಆ ಮಧ ಕಥೆಗೆ 48 ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಬಂದಿತ್ತು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಹೀರೋ ಶ್ರೀನಿ.
ಸದ್ಯಕ್ಕೆ ಈ ಹೊಸ ಚಿತ್ರದಲ್ಲಿ ನಟಿಸುತ್ತಿರೋ ಶ್ರೀನಿ ಅವರ ಓಲ್ಡ್ ಮಾಂಕ್ ರಿಲೀಸ್‍ಗೆ ರೆಡಿಯಾಗಿದೆ.