ಬಡವ ರಾಸ್ಕಲ್ ಟ್ರೇಲರ್ ನೋಡಿದವರಿಗೆ ಒಂದು ವಿಷಯವಂತೂ ಪಕ್ಕಾ ಗೊತ್ತಾಗುತ್ತೆ. ಇದು ಮಿಡ್ಲ್‍ಕ್ಲಾಸ್ ಹುಡುಗರ ಲವ್ & ಫ್ರೆಂಡ್‍ಶಿಪ್ & ಫ್ಯಾಮಿಲಿ ಪಡಿಪಾಟಲಿನ ಕಥೆ ಅನ್ನೋದು. ಆದರೆ, ಈ ಸಿನಿಮಾದಲ್ಲಿ ಧನಂಜಯ್ ಜೊತೆ ಗೆಳೆಯರಾಗಿ ನಟಿಸಿರೋ ಆ ಇಬ್ಬರೂ ರಿಯಲ್ ಲೈಫ್‍ನಲ್ಲೂ ಫ್ರೆಂಡ್ಸ್ ಅನ್ನೋದು ಇನ್ನೊಂದು ಅಚ್ಚರಿ.
ಬಡವ ರಾಸ್ಕಲ್ ಫ್ರೆಂಡ್ `ನಾಗ'ನಾಗಿ ನಟಿಸಿರೋ ನಾಗಭೂಷಣ್ ಧನಂಜಯ್ ಅವರಿಗೆ ರಂಗಭೂಮಿ ದಿನಗಳಿಂದಲೂ ಸ್ನೇಹಿತ. ಹೀಗಾಗಿ ನಟನೆಯೂ ಸಲೀಸು. ನನಗೆ ಧನಂಜಯ್ ಹೀರೋ, ಇದು ಸಿನಿಮಾ ಎಂಬ ಫೀಲಿಂಗ್ ಇರಲೇ ಇಲ್ಲ. ಅದೊಂಥರಾ ಫ್ರೆಂಡ್ಸ್ ಟ್ರಿಪ್ ಇದ್ದಂತಿತ್ತು ಎನ್ನುತ್ತಾರೆ ನಾಗಭೂಷಣ್.
ಗಣಪ ಅನ್ನೋ ಕ್ಯಾರೆಕ್ಟರ್ ಮಾಡಿರೋ ಪೂರ್ಣಚಂದ್ರ ಮೈಸೂರು ಕೂಡಾ ಧನಂಜಯ್ ಅವರಿಗೆ ರಂಗಭೂಮಿ ಮಿತ್ರ. ಸಾಲ ಕೊಡೋದು ಗಣಪನ ವೃತ್ತಿ. ಅಂತಹ ಗಣಪ ಕಷ್ಟದಲ್ಲಿದ್ದಾಗ ಬಡವ ರಾಸ್ಕಲ್ ಕಾಪಾಡ್ತಾನೆ. ಅದಕ್ಕಾಗಿ ಋಣಿಯಾಗಿರೋ ಗಣಪನ ಪಾತ್ರ, ಧನಂಜಯ್ ಪಾತ್ರಕ್ಕಾಗಿ ಏನು ಬೇಕಾದರೂ ಮಾಡುವ ಲೆವೆಲ್ಲಿಗೆ ಹೋಗುತ್ತೆ. ತುಂಬಾ ವರ್ಷಗಳ ಗೆಳೆತನದಿಂದಾಗಿ ಧನಂಜಯ್ ಜೊತೆ ನಟಿಸುತ್ತಿದ್ದೇವೆ ಅನ್ನಿಸಲಿಲ್ಲ ಅನ್ನೋದು ಪೂರ್ಣಚಂದ್ರ ಅವರ ಮಾತು.
ನಿರ್ದೇಶಕ ಶಂಕರ್ ಗುರು ಕೂಡಾ ಗೆಳೆಯರ ಬಳಗದವರೇ. ಅಮೃತಾ ಅಯ್ಯಂಗಾರ್ ಕೂಡಾ ಧನಂಜಯ್ ಜೊತೆ ಸ್ನೇಹ ಕಾಯ್ದಿಟ್ಟುಕೊಂಡಿದ್ದಾರೆ.
ಧನಂಜಯ್ ಎಷ್ಟು ಒಳ್ಳೆಯ ಸ್ನೇಹಿತ ಅನ್ನೋದಕ್ಕೆ ಸಾಕ್ಷಿಯಾಗಿ ಬಡವ ರಾಸ್ಕಲ್ ಪ್ರೀರಿಲೀಸ್ ಈವೆಂಟ್ ಶೋ ಇತ್ತು. ಈಗ ಸಿನಿಮಾ ಕೂಡಾ. ಫೆಬ್ರವರಿ 24ಕ್ಕೆ ಗೆಟ್ ರೆಡಿ.