ಬಡವ ರಾಸ್ಕಲ್. ಟ್ರೇಲರ್ ನೋಡಿದವರಿಗೆ ಇದು ಫ್ರೆಂಡ್‍ಶಿಪ್ ಸ್ಟೋರಿನಾ? ಲವ್ ಸ್ಟೋರಿನಾ? ಫ್ಯಾಮಿಲಿ ಸ್ಟೋರಿನಾ? ನಮ್ಮ ಮನೆ ಅಕ್ಕಪಕ್ಕದಲ್ಲೇ ನಡೆಯೋ ನಾವು ದಿನವೂ ನೋಡುವ ಜೀವನದ ಕಥೆನಾ? ಹೀಗೆ ಬೆರಗು ಹುಟ್ಟಿಸುತ್ತಲೇ ಬದುಕು ತೋರಿಸುತ್ತಿದ್ದೇವೆ ಎಂದು ಹೇಳುತ್ತಿರೋದು ಬಡವ ರಾಸ್ಕಲ್ ಟ್ರೇಲರ್. ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಡಾಲಿ ಧನಂಜಯ್ ಅವರೇ ಪ್ರೊಡ್ಯೂಸರ್. ಅವರೇ ಹೀರೋ.
ಅಫ್‍ಕೋರ್ಸ್.. ಯಾವುದೇ ಚಿತ್ರಕ್ಕೆ ಹೀರೋ ಆಗೋದು ಮೊದಲು ಕಥೆ.. ನಂತರ ಡೈರೆಕ್ಟರ್. ಈ ಚಿತ್ರದ ಡೈರೆಕ್ಟರ್ ಶಂಕರ್ ಗುರು. ವಿಚಿತ್ರವೆಂದರೆ ಈ ಶಂಕರ್ ಗುರು ಒಂದು ಕಾಲದಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆಯಿಂದ ಸಂಜೆವರೆಗೆ ಕೊರಿಯರ್ ಬಾಯ್, ಸಂಜೆಯ ಮೇಲೆ ನೈಟ್ ಕಾಲೇಜ್. ಹೀಗೆ ಓದುತ್ತಲೇ ಸೇರಿದ್ದು ಗುರುಪ್ರಸಾದ್ ಮಠಕ್ಕೆ. ಅವರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿರುವಾಗ ಹೊಳೆದಿದ್ದೇ ಬಡವ ರಾಸ್ಕಲ್ ಸ್ಟೋರಿ.
ಇದು ನಾವು ನೀವು ನೋಡಿರೊ ಮಧ್ಯಮ ವರ್ಗದ ಜನರ ಕಥೆ. ಮನೆಗಳಲ್ಲಿ ಗಂಡ, ಹೆಂಡತಿ, ಮಕ್ಕಳು ಒಟ್ಟಿಗೇ ಇರುತ್ತಾರೆ. ಜಗಳ ಆಡ್ತಾರೆ. ಜಗಳದಲ್ಲೇ ಪ್ರೀತಿ ಮಾಡ್ತಾರೆ. ಕಿತ್ತಾಡ್ತಾರೆ. ಒಂದಾಗ್ತಾರೆ. ಅಂತಹ ಮನೆಯಲ್ಲೊಬ್ಬ ವಿದ್ಯಾವಂತ ಯುವಕ. ಇವಿಷ್ಟನ್ನೂ ಇಟ್ಟುಕೊಂಡು ಕಥೆ ಮಾಡಿದ್ದೇವೆ. ಇದು ಧನಂಜಯ್ ಅವರ ಬ್ಯಾನರ್‍ನ ಮೊದಲ ಸಿನಿಮಾ ಎನ್ನುವುದೂ ವಿಶೇಷ. ಕಥೆಯಂತೂ ನಿಮಗೆ ಬೇರೆಯದೇ ಫೀಲ್ ಕೊಡುತ್ತೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ಶಂಕರ್ ಗುರು.
ಧನಂಜಯ್ ಅವರಿಗೆ ಇಲ್ಲಿ ಅಮೃತಾ ಅಯ್ಯಂಗಾರ್ ನಾಯಕಿ. ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ಗುರು ಪ್ರಸಾದ್ ಸೇರಿದಂತೆ ಬೃಹತ್ ತಾರಾಗಣವೂ ಇದೆ.