` ವಿಧಾನಸಭೆಯಲ್ಲಿ ಅಪ್ಪು, ಶಿವರಾಂಗೆ ನುಡಿ ನಮನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಧಾನಸಭೆಯಲ್ಲಿ ಅಪ್ಪು, ಶಿವರಾಂಗೆ ನುಡಿ ನಮನ
Puneeth Rajkumar, Shivaram

ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಸಂಪ್ರದಾಯದಂತೆ ಅಧಿವೇಶನದ ಮೊದಲ ದಿನ ಮೃತಪಟ್ಟ ಗಣ್ಯರ ಸಂತಾಪಕ್ಕೆ ಮೀಸಲಾಗಿತ್ತು. ಸದನದಲ್ಲಿ ಪುನೀತ್ ರಾಜ್‍ಕುಮಾರ್ ಮತ್ತು ಶಿವರಾಂ ಅವರಿಗೆ ಸಂತಾಪ ಸೂಚಿಸಲಾಯಿತು.

ಬಸವರಾಜ ಬೊಮ್ಮಾಯಿ, ಸಿಎಂ : ಆ ದಿನ ನಾವು ಆಸ್ಪತ್ರೆಗೆ ಹೋಗುವಷ್ಟರ ವೇಳೆಗೆ ಪುನೀತ್ ಇಲ್ಲ ಅನ್ನೋದು ಗೊತ್ತಾಗಿತ್ತು. ಆ ನೋವಿನ ನಡುವೆಯೂ ಸರ್ಕಾರದ ಜೊತೆಗೆ ಅವರ ಇಡೀ ಕುಟುಂಬ ಸಹಕರಿಸಿತು. ಅವರು

ತಂದೆಯನ್ನೇ ಮೀರಿಸಿದ ಮಗ. ಅವರ ಅಗಲಿಕೆಯನ್ನು ಕರ್ನಾಟಕಕ್ಕೆ ಇನ್ನೂ ಹಲವು ವರ್ಷ ಕಾಡಲಿದೆ. ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ : ವೈಯಕ್ತಿಕವಾಗಿ ನನಗೂ, ರಾಜ್ ಕುಟುಂಬಕ್ಕೂ ಬೇರೆಯದೇ ನಂಟು. ನಾವು ಒಂದೇ ಕಾಡಿನವರು. ಸಿನಿಮಾಗಳನ್ನು ನೋಡುವುದನ್ನೇ ಬಿಟ್ಟಿದ್ದ ನನ್ನನ್ನು ಮತ್ತೆ ಸಿನಿಮಾ ನೋಡುವಂತೆ ಮಾಡಿದ್ದು ಪುನೀತ್ ಚಿತ್ರಗಳು. ಪುನೀತ್ ರಾಜ್ ಮಗನಾಗಿ ಬಂದರೂ, ಹೋಗುವ ವೇಳೆಗೆ ತಮ್ಮದೇ ಆದ ವ್ಯಕ್ತಿತ್ವ, ಘನತೆ ರೂಪಿಸಿಕೊಂಡಿದ್ದರು. ರಾಜ್ ಮಗ ಎಂಬ ನೆರಳಿನಿಂದ ಹೊರಬಂದು ಬೆಳೆದು ನಿಂತಿದ್ದರು. ನನ್ನ ಜೀವನದಲ್ಲಿ ವ್ಯಕ್ತಿಯೊಬ್ಬನ ಅಗಲಿಕೆಗೆ ಇಷ್ಟೊಂದು ಜನ ಬಂದಿದ್ದು ನೋಡಿಲ್ಲ.

ಮಾಧುಸ್ವಾಮಿ, ಸಚಿವ : ಪುನೀತ್ ಅವರದ್ದು ಸರಳ ವ್ಯಕ್ತಿತ್ವ. ಕೆಎಂಎಫ್ ರಾಯಭಾರಿಯಾಗಲು ಅವರು ಒಪ್ಪಿದ್ದರು. ಅದಕ್ಕಾಗಿ ಒಂದೇ ಒಂದು ಪೈಸೆಯನ್ನೂ ಸಂಭಾವನೆಯನ್ನಾಗಿ ಪಡೆದುಕೊಂಡಿರಲಿಲ್ಲ.

ಶಶಿಕಲಾ ಜೊಲ್ಲೆ, ಸಚಿವೆ : ನನ್ನ ಮಗ ವಿಶೇಷ ಚೇತನ. ಆತನಿಗೆ ಈಗಲೂ ಸರಿಯಾಗಿ ಮಾತನಾಡೋಕೆ ಬರಲ್ಲ. ಆತನ ಬಗ್ಗೆ ಟಿವಿ9ನಲ್ಲಿ ಕಾರ್ಯಕ್ರಮ ಮಾಡಿದ್ದರು. ಅದನ್ನು ನೋಡಿದ್ದ ಪುನೀತ್ ಒಮ್ಮೆ ಮಡಿಕೇರಿಯಲ್ಲಿ ನನ್ನ ಮಗ ವಾಕ್ ಮಾಡುವಾಗ ಗುರುತು ಹಿಡಿದು ಮಾತನಾಡಿಸಿ, ಫೋಟೋ ತೆಗೆದುಕೊಂಡು ನನ್ನ ಮಗನಿಗೆ ಅಭಿನಂದನೆ ಸಲ್ಲಿಸಿದ್ದರು. ನಾನು ಅವರನ್ನು ಒಮ್ಮೆಯೂ ಭೇಟಿ ಮಾಡಿಲ್ಲ. ಆದರೆ ಪುನೀತ್ ನಿಧನರಾದ ದಿನ ಕಣ್ಣೀರು ಹಾಕಿದ್ದೆ.

ಶಿವಲಿಂಗೇಗೌಡ, ಶಾಸಕ : ಅವರು ತಮ್ಮ ಚಿತ್ರಗಳು ಮತ್ತು ತಮ್ಮ ವ್ಯಕ್ತಿತ್ವದ ಮೂಲಕ ಒಳ್ಳೆಯತನ, ಸರಳತೆಯನ್ನೇ ಸಾರಿದರು. ಡಾ.ರಾಜ್ ಕುಮಾರ್ ಮಗ ಎನ್ನುವುದನ್ನೂ ಮೀರಿ ಬೆಳೆದು ನಿಂತರು. ಒಬ್ಬ ದೊಡ್ಡ ವ್ಯಕ್ತಿ ಹೇಗಿರಬೇಕು ಅನ್ನೋದಕ್ಕೆ ಅವರೇ ಮಾದರಿ.

ಶಿವರಾಂ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಶಿವರಾಮ್ ಅವರ ಮನೆಯಲ್ಲಿ ಒಂದು ದೊಡ್ಡ ಲೈಬ್ರೆರಿ ಇದ್ದು, ಅದನ್ನು ಸಂರಕ್ಷಿಸಲು ಯೋಜನೆ ರೂಪಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.