ಪುಷ್ಪ. ರಂಗಸ್ಥಳಂ ಸುಕುಮಾರ್ ನಿರ್ದೇಶನದ ಚಿತ್ರ. ಅಲ್ಲು ಅರ್ಜುನ್ ಎದುರು ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ತೆಲುಗಿನ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡಕ್ಕೂ ಬರುತ್ತಿದೆ. ಟ್ರೇಲರ್ ಈಗಾಗಲೇ ಬಂದಿದೆ. ಆದರೆ, ಟ್ರೇಲರ್ ನೋಡಿದವರಿಗೆ ರಶ್ಮಿಕಾ ಮಂದಣ್ಣ ನಿರಾಸೆ ಮೂಡಿಸಿದ್ದರು. ರಶ್ಮಿಕಾ ಅವರ ಪಾತ್ರಕ್ಕೆ ಬೇರೆ ಯಾರೋ ಡಬ್ಬಿಂಗ್ ಮಾಡಿದ್ದರು. ಆದರೆ, ತೆಲುಗಿನಲ್ಲಿ ಸ್ವತಃ ರಶ್ಮಿಕಾರೇ ಡಬ್ ಮಾಡಿದ್ದರು. ಕನ್ನಡದ ಹುಡುಗಿ, ಕನ್ನಡದಲ್ಲಿಯೂ ಅವರೇ ಡಬ್ ಮಾಡಬೇಕಿತ್ತು ಎಂಬ ಆಕ್ರೋಶ ಕನ್ನಡಿಗರಿಂದ ಹೊರಬಿದ್ದಿತ್ತು.
ಅದರಲ್ಲೂ ಆರ್‍ಆರ್‍ಆರ್ ಚಿತ್ರದಲ್ಲಿ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಅವರೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ ಅನ್ನೋದು ಗೊತ್ತಾದ ಮೇಲೆ ಆ ಆಕ್ರೋಶ ಇನ್ನಷ್ಟು ದೊಡ್ಡದಾಗಿತ್ತು. ಅದಕ್ಕೆಲ್ಲ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ.
ಕನ್ನಡಕ್ಕೆ ಡಬ್ ಮಾಡುವ ಆಸೆ ನನಗೂ ಇತ್ತು. ಆದರೆ ನನ್ನ ಕೈಲೀಗ 4 ಚಿತ್ರಗಳಿವೆ. ತುಂಬಾ ಬ್ಯುಸಿ ಇದ್ದೇನೆ. ತೆಲುಗಿನಲ್ಲಿಯೂ ಇನ್ನೂ ಡಬ್ಬಿಂಗ್ ಪೂರ್ತಿ ಆಗಿಲ್ಲ. ಸಮಯ ಹೊಂದಿಸೋಕೆ ಆಗುತ್ತಿಲ್ಲ. ಪುಷ್ಪ ಚಿತ್ರಕ್ಕೆ ಕನ್ನಡ ಅವತರಣಿಕೆಯಲ್ಲಿ, ನನ್ನ ಪಾತ್ರಕ್ಕೆ ಕನ್ನಡದಲ್ಲಿ ನಾನು ಡಬ್ ಮಾಡಿಲ್ಲ ಎನ್ನುವ ಬೇಸರ ನನಗೂ ಇದೆ. ಮುಂದೆ ಇಂತಹ ತಪ್ಪು ಆಗೋಕೆ ಬಿಡಲ್ಲ ಎಂದಿದ್ದಾರೆ ರಶ್ಮಿಕಾ ಮಂದಣ್ಣ.