ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಶಿವರಾಂ ನಿಧನರಾಗಿದ್ದಾರೆ. ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಂ, ಮೆದುಳು ನಿಷ್ಕ್ರಿಯಗೊಂಡು ವಿಧಿವಶರಾಗಿದ್ದಾರೆ. 4 ದಿನಗಳ ಹಿಂದೆ ಅವರಿಗೆ ಅಪಘಾತವಾಗಿತ್ತು. ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಕುಸಿದುಬಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಸಾಧ್ಯವಾಗಲಿಲ್ಲ.
ಕನ್ನಡ ಚಿತ್ರರಂಗದಲ್ಲಿ ಶಿವರಾಂ ಕೇವಲ ನಟರಷ್ಟೇ ಆಗಿರಲಿಲ್ಲ. ನಿರ್ಮಾಪಕರೂ ಆಗಿದ್ದರು. ರಾ.ಶಿ.ಬ್ರದರ್ಸ್ ಸಂಸ್ಥೆಯಲ್ಲಿ ಗೆಜ್ಜೆಪೂಜೆ, ಉಪಾಸನೆ, ನಾನೊಬ್ಬ ಕಳ್ಳ, ಡ್ರೈವರ್ ಹನುಮಂತು, ಬಹಳ ಚೆನ್ನಾಗಿದೆ ಚಿತ್ರಗಳನ್ನು ನಿರ್ಮಿಸಿ ಗೆದ್ದಿದ್ದರು. ತಮಿಳು, ಹಿಂದಿಯಲ್ಲೂ ಸಿನಿಮಾ ಮಾಡಿದ್ದರು. ಸಿಂಗೀತಂ ಶ್ರೀನಿವಾಸರಾವ್, ಕೆಎಸ್ಎಲ್ ಸ್ವಾಮಿ, ಗೀತಪ್ರಿಯ ಮೊದಲಾದ ಹಿರಿಯ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕರಾಗಿದ್ದರು. ಹೃದಯ ಸಂಗಮ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರೋದ್ಯಮದ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿದ ಅನುಭವವಿತ್ತು.
ಶರಪಂಜರ, ಬೆಳ್ಳಿಮೋಡ, ಗುರು ಶಿಷ್ಯರು, ಬನಶಂಕರಿ, ಶುಭಮಂಗಳ, ಎಡಕಲ್ಲು ಗುಡ್ಡದ ಮೇಲೆ, ಹೊಂಬಿಸಿಲು, ಹೊಸಬೆಳಕು, ಶ್ರಾವಣ ಬಂತು, ಹಾಲು ಜೇನು, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ, ಲಗ್ನ ಪತ್ರಿಕೆ, ಬಂಗಾರದ ಪಂಜರ, ನಾ ಮೆಚ್ಚಿದ ಹುಡುಗ, ನಾಗರಹೊಳೆ, ಗೀತಾ, ಟೋನಿ, ಎರಡು ನಕ್ಷತ್ರಗಳು, ಯಜಮಾನ, ಸಿಂಹಾದ್ರಿಯ ಸಿಂಹ, ಧರ್ಮದೊರೈ(ತಮಿಳು) ಹೀಗೆ ನಟಿಸಿದ ಚಿತ್ರಗಳು ನೂರಾರು. ಡಾ.ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವಣ್ಣ ಸೇರಿದಂತೆ ಹಲವು ಕಲಾವಿದರ ಜೊತೆ ನಟಿಸಿದ್ದರು.