ನನಗೆ ಇದು ಬಿಗ್ ಕಮರ್ಷಿಯಲ್ ಮೂವಿ. ಬಿಗ್ ಪ್ರೊಡ್ಯೂಸರ್.. ಬಿಗ್ ಬ್ಯಾನರ್.. ದಕ್ಷಿಣ ಭಾರತದ ಬಿಗ್ ಬಿಗ್ ತಾರಾಗಣ.. ಕನ್ನಡ ಚಿತ್ರರಂಗದ ಬಿಗ್ ಸ್ಟಾರ್ ಜೊತೆ ಸಿನಿಮಾ.. ನನಗಿದು ಎಲ್ಲವೂ ಹೊಸ ಅನುಭವ.. ಹೀಗೆ ಹೇಳುತ್ತಲೇ ಥ್ರಿಲ್ ಆಗುತ್ತಾರೆ ಅಶಿಕಾ ರಂಗನಾಥ್.
ಮದಗಜ ಚಿತ್ರಕ್ಕೆ ತಮ್ಮ ಎಂಟ್ರಿಯ ಬಗ್ಗೆ ರಿಲೀಸ್ ಆಗುವ ಸಮಯದಲ್ಲೂ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ ಅಶಿಕಾ. ಕನ್ನಡದಲ್ಲಿ ಕಮರ್ಷಿಯಲ್ ಚಿತ್ರವೊಂದರಲ್ಲಿ ನಾಯಕಿಯ ಪರಿಚಯವನ್ನು ಅಷ್ಟು ದೊಡ್ಡ ಮಟ್ಟದಲ್ಲಿ ಮಾಡುವುದೇ ಅಪರೂಪ. ಆ ಅನುಭವ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸಾಹವನ್ನು ತುಂಬಿದ್ದು ಸುಳ್ಳಲ್ಲ ಎನ್ನುವ ಅಶಿಕಾಗೆ ಶ್ರೀಮುರಳಿ, ಜಗಪತಿ ಬಾಬು ಅವರಂತ ದೊಡ್ಡ ನಟರ ಎದುರು ನಟಿಸಿರುವ ಖುಷಿಯಿದೆ. ಡೈರೆಕ್ಟರ್ ಮಹೇಶ್ ಕೆಲಸ ಮಾಡಿಸಿಕೊಳ್ಳುವ ಶೈಲಿ ಇಷ್ಟವಾಗಿದೆ.
ರ್ಯಾಂಬೋ 2 ಮತ್ತು ಚುಟುಚುಟು ಹಾಡು ಹಿಟ್ ಆದ ಬಳಿಕ ನನಗಿನ್ನು ಡ್ಯಾನ್ಸಿಂಗ್ ಪಾತ್ರಗಳೇ ಸಿಗುತ್ತವೆ ಎಂದುಕೊಂಡಿದ್ದೆ. ಆದರೆ, ಮದಗಜ ಚಿತ್ರದ ಪಾತ್ರ ನನ್ನನ್ನು ಬೇರೆಯೇ ರೀತಿಯಲ್ಲಿ ಪರಿಚಯಿಸಿತು ಎನ್ನುವ ಅಶಿಕಾಗೆ ತಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ತಿಳಿದುಕೊಳ್ಳೋ ಕುತೂಹಲವಂತೂ ಇದೆ.