ಒಂದು ಚಿತ್ರವನ್ನು ಸಿದ್ಧ ಮಾಡಿ ತೆರೆಗೆ ತರುವ ಪ್ರತಿಯೊಬ್ಬರಿಗೂ ಒಂದು ಆಸೆ ಸಹಜವಾಗಿಯೇ ಇರುತ್ತದೆ. ತಮ್ಮ ಕ್ಷೇತ್ರದ ಸಾಧಕರೆಲ್ಲರೂ ಈ ಚಿತ್ರವನ್ನು ಮೆಚ್ಚಬೇಕು ಎನ್ನುವುದು. ಸದ್ಯಕ್ಕೆ ರಾಜ್ ಬಿ.ಶೆಟ್ಟಿ ಆ ಸಾಧನೆ ಮಾಡಿದ್ದಾರೆ. ಒಂದು ಕಡೆ ಗರುಡ ಗಮನ ವೃಷಭ ವಾಹನವನ್ನು ಪ್ರೇಕ್ಷಕರು, ವಿಮರ್ಶಕರು ಮೆಚ್ಚಿದ್ದಾರೆ. ಬಾಕ್ಸಾಫೀಸ್ ದಾಖಲೆ ಬರೆಯುತ್ತಿದೆ. ಸಿನಿಮಾ ಚೆನ್ನಾಗಿದೆಯಾ..? ಕೆಟ್ಟದಾಗಿಯಾ..? ಓಕೆನಾ..? ಆವರೇಜ್ ಮೂವಿನಾ..? ಎಕ್ಸ್‍ಟ್ರಾರ್ಡನರಿ ಸಿನಿಮಾನಾ..? ಹೀಗೆ.. ಪರ ವಿರೋಧ ಎರಡೂ ಚರ್ಚೆಗಳು ಚಾಲ್ತಿಯಲ್ಲಿವೆ. ಇದೆಲ್ಲದರ ಮಧ್ಯೆ ರಾಜ್ ಬಿ.ಶೆಟ್ಟಿಗೆ ಚಿತ್ರರಂಗದ ನಿರ್ದೇಶಕರಿಂದ ಪ್ರಶಂಸೆಗಳು ಸಿಗುತ್ತಿವೆ.
ಚಿತ್ರದಲ್ಲಿ ನಟಿಸಿರುವ ಇನ್ನೊಬ್ಬ ಹೀರೋ ರಿಷಬ್ ಶೆಟ್ಟಿ, ಸ್ವತಃ ಹಿಟ್ ಡೈರೆಕ್ಟರ್ ಅನ್ನೋದನ್ನು ಮರೆಯುವಂತಿಲ್ಲ. ಚಿತ್ರವನ್ನು ವಿತರಣೆ ಮಾಡಿದವರಲ್ಲಿ ಒಬ್ಬರಾದ ರಕ್ಷಿತ್ ಶೆಟ್ಟಿ ಕೂಡಾ ಸ್ಟಾರ್ ನಿರ್ದೇಶಕರೇ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡಾ ಚಿತ್ರದ ಬಗ್ಗೆ ಚೆಂದದ ಮಾತನಾಡಿದ್ದಾರೆ.
ಅವರಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಪುಟ್ಟ ಪತ್ರವನ್ನೇ ಬರೆದು ರಾಜ್ ಬಿ.ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಶಶಾಂಕ್, ಅನೂಪ್ ಭಂಡಾರಿ, ಸತ್ಯ ಪ್ರಕಾಶ್, ಹೇಮಂತ್ ರಾವ್.. ಹೀಗೆ ಚಿತ್ರವನ್ನು ನೋಡಿದವರೆಲ್ಲ ಗರುಡ ಗಮನ ವೃಷಭ ವಾಹನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.