ರಂಗಿತರಂಗ. 2015ರಲ್ಲಿ ರಿಲೀಸ್ ಆಗಿ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ. ಆ ಚಿತ್ರದ ರೀಮೇಕ್ ರೈಟ್ಸ್ಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಇತ್ತೀಚೆಗೆ ಬಾಲಿವುಡ್ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಕೋಮಲ್ ಉನ್ನಾವೆ ರಂಗಿತರಂಗ ರೀಮೇಕ್ ಮಾಡುತ್ತಿದ್ದೇವೆ ಎಂದಿದ್ದರು. ರೀಮೇಕ್ ಹಕ್ಕು ಖರೀದಿಸಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡಾ ಶುರು ಎಂದಿದ್ದರು. ಆಕೆಯೇನೂ ಸಾಮಾನ್ಯರಲ್ಲ. ಒನ್ ವೇ ಟಿಕೆಟ್ ಹಾಗೂ ಬೈಸಿಕಲ್ ಬಾಯ್ಸ್ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕಿ. ವಿಚಿತ್ರವೆಂದರೆ ಇದು ಚಿತ್ರದ ನಿರ್ಮಾಪಕರಿಗೇ ಗೊತ್ತಿಲ್ಲ.
ರಂಗಿತರಂಗದ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದಿರುವುದಾಗಿ ಪ್ರೊಡಕ್ಷನ್ ಹೌಸ್ ಒಂದು ಹೇಳುತ್ತಿದೆ. ಆದರೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕುಗಳೂ ರಂಗಿತರಂಗ ಸಿನಿಮಾದ ಸಹ ನಿರ್ಮಾಪಕ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಸುಧಾಕರ್ ಭಂಡಾರಿ ಸಾಜ ಅವರ ಬಳಿಯೇ ಇದೆ. ನಮ್ಮ ಅನುಮತಿ ಇಲ್ಲದೇ ಯಾರಾದರೂ ರಂಗಿತರಂಗ ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡುವುದಾಗಲೀ ಖರೀದಿ ಮಾಡುವುದಾಗಿ ಅಥವಾ ರೀಮೇಕ್ ಮಾಡುವುದಾಗಲೀ ಮಾಡಿದರೆ ಅದು ಕಾನೂನು ಉಲ್ಲಂಘನೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.
ಹೆಚ್.ಕೆ. ಪ್ರಕಾಶ್ ನಿರ್ಮಿಸಿದ್ದ ರಂಗಿತರಂಗ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದರು. ನಿರೂಪ್ ಭಂಡಾರಿ, ಸಾಯಿ ಕುಮಾರ್, ರಾಧಿಕಾ ನಾರಾಯಣ್ ಹಾಗೂ ಆವಂತಿಕಾ ಶೆಟ್ಟಿ ನಟಿಸಿದ್ದ ಚಿತ್ರ, ಬಾಹುಬಲಿ ಎದುರು ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು.