` ಮೋದಿಯೇ ಕರೆದರೂ ರಾಜಕೀಯಕ್ಕೆ ಹೋಗಲಿಲ್ಲ ಅಪ್ಪು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮೋದಿಯೇ ಕರೆದರೂ ರಾಜಕೀಯಕ್ಕೆ ಹೋಗಲಿಲ್ಲ ಅಪ್ಪು..!
ಮೋದಿಯೇ ಕರೆದರೂ ರಾಜಕೀಯಕ್ಕೆ ಹೋಗಲಿಲ್ಲ ಅಪ್ಪು..!

ಪುನೀತ್ ರಾಜ್‍ಕುಮಾರ್ ನಿಧನರಾಗುವವರೆಗೆ ಅವರ ಸರಳತೆ ಗೊತ್ತಿತ್ತೇ ಹೊರತು ಸಮಾಜಸೇವೆಗಳು ಜನಕ್ಕೆ ಗೊತ್ತಿರಲಿಲ್ಲ. ಎಲ್ಲ ರಾಜಕೀಯ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದ ಅಪ್ಪು ರಾಜಕೀಯದಿಂದ ದೂರವೇ ಇದ್ದರು. ಆ ವಿಷಯದಲ್ಲಿ ಅಪ್ಪನ ಹಾದಿಯಲ್ಲೇ ನಡೆದಿದ್ದರು ಅಪ್ಪು.

ಹಾಗೆಂದು ಪುನೀತ್ ಅವರಿಗೆ ರಾಜಕೀಯ ನಾಯಕರು ಪರಿಚಯವೇ ಇರಲಿಲ್ಲ ಎಂದಲ್ಲ. ಸಿದ್ದರಾಮಯ್ಯ ಅವರನ್ನು ಮಾಮ ಎನ್ನುತ್ತಿದ್ದ ಅಪ್ಪು, ಅಂಬರೀಷ್ ಅವರನ್ನು ಕೂಡಾ ಮಾಮ ಎಂದೇ ಕರೆಯುತ್ತಿದ್ದರು. ಡಿಕೆ ಶಿವಕುಮಾರ್ ಮನೆ ಎದುರೇ ಅವರ ಮನೆಯಿತ್ತು. ಅತ್ತಿಗೆ ಗೀತಾ ಅವರ ತಂದೆ ಬಂಗಾರಪ್ಪ ಮಾಜಿ ಸಿಎಂ. ಅತ್ತಿಗೆಯ ಸೋದರರಿಬ್ಬರೂ ರಾಜಕೀಯದಲ್ಲಿದ್ದವರು. ಇರುವವರು. ಅತ್ತಿಗೆ ಗೀತಾ ಚುನಾವಣೆಗೆ ನಿಂತಾಗಲೂ ಪ್ರಚಾರಕ್ಕೆ ಹೋಗಲಿಲ್ಲ. ತಾವು ಹಲವು ಬಾರಿ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದೆವು. ಅವರು ಇಷ್ಟವಿಲ್ಲ ಎಂದಿದ್ದರು ಎಂಬ ವಿಷಯವನ್ನು ಡಿಕೆಶಿ, ಸಿದ್ದು, ಡಿಕೆ ಸುರೇಶ್ ಸೇರಿದಂತೆ ಹಲವು ಹೇಳಿಯೂ ಇದ್ದಾರೆ. ಆದರೆ, ಈಗ ಬಂದಿರೋ ಸುದ್ದಿ ಅದಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಪುನೀತ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದರಂತೆ.

ಪುನೀತ್ ಅವರ ಆಪ್ತ ಸಹಾಯಕರೂ ಆಗಿದ್ದ ರಾಜಕುಮಾರ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿ.ಎಲ್.ಸಂತೋಷ್, ಜಗ್ಗೇಶ್, ಎಸ್.ವಿ.ಬಾಬು ಪುನೀತ್ ಅವರನ್ನು ಭೇಟಿ ಮಾಡಿದ್ದರು.  ರಾಜಕೀಯಕ್ಕೆ ಆಹ್ವಾನಿಸಿದ್ದರು. ಪುನೀತ್ ಸ್ಪಷ್ಟವಾಗಿ ನನಗೆ ರಾಜಕೀಯಕ್ಕೆ ಸೇರುವ ಇಷ್ಟವಿಲ್ಲ ಎಂದಿದ್ದರು.

ನಂತರ ಗುಜರಾತ್ ಬಿಜೆಪಿಯ ಬಿ.ವಿ.ಎಸ್.ಶರ್ಮಾ, ಆಂಧ್ರಪ್ರದೇಶದ ಬಿಜೆಪಿ ಮುಖಂಡ ಸೋಮು ವಿ.ರಾಜು ಕೂಡಾ ಪ್ರಯತ್ನ ಪಟ್ಟರು. ರಾಜಕೀಯಕ್ಕೆ ಸೇರದಿದ್ದರೂ ಪರವಾಗಿಲ್ಲ, ಒಂದ್ಸಲ ದೆಹಲಿಗೆ ಬಂದು ಮೋದಿಯನ್ನು ಭೇಟಿ ಮಾಡಿಸಿ ಎಂದಿದ್ದರು. ಪುನೀತ್ ಅವರ ಪರವಾಗಿ ನಾನೇ ಈ ವಿಷಯದಲ್ಲಿ ಅವರನ್ನು ಒಪ್ಪಿಸುವುದು ಅಸಾಧ್ಯ ಎಂದು ತಿಳಿಸಿದ್ದೆ.

ಒತ್ತಡ ಹೆಚ್ಚುತ್ತಾ ಹೋದಾಗ ನಾನೇ ಒಂದು ಸಲಹೆ ಕೊಟ್ಟೆ. ಬಿಜೆಪಿ ನಾಯಕನ್ನು ಭೇಟಿ ಮಾಡಿದೆ ಎಂದುಕೊಳ್ಳಬೇಡಿ. ದೇಶದ ಪ್ರಧಾನಿಯನ್ನು ಭೇಟಿ ಮಾಡಿದೆ ಎಂದುಕೊಳ್ಳಿ. ಅವರಿಗೆ ಡಾ.ರಾಜ್ ಬಗ್ಗೆ ಅವರೇ ಬರೆದಿದ್ದ ರಾಜ್‍ಕುಮಾರ್ ದಿ ಪರ್ಸನ್ ಬಿಹೈಂಡ್ ಪರ್ಸನಾಲಿಟಿ ಪುಸ್ತಕವನ್ನು ಕೊಡುವ ವೇಳೆ ಭೇಟಿ ಮಾಡಿದರು. ಸುಮಾರು 7 ನಿಮಿಷ ಮೋದಿ ಮತ್ತು ಪುನೀತ್ ಮಧ್ಯೆ ಮಾತುಕತೆ ನಡೆಯಿತು. ನಿಮ್ಮಂತ ಯುವಕರು ರಾಜಕೀಯಕ್ಕೆ ಬರಬೇಕು ಎಂದರು ಮೋದಿ. ಅಪ್ಪು ಏನೂ ಮಾತನಾಡದೆ ಮುಗುಳ್ನಕ್ಕು ವಂದನೆ ಸಲ್ಲಿಸಿದ್ದರು ಎಂದು ಅಂದಿನ ಘಟನೆ ಹಂಚಿಕೊಂಡಿದ್ದಾರೆ ರಾಜಕುಮಾರ್.

ನನಗೆ ಎಲ್ಲ ಪಕ್ಷದವರೂ ಬೇಕು. ಎಲ್ಲ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ.  ಯಡಿಯೂರಪ್ಪ,  ಸಿದ್ದರಾಮಯ್ಯ, ಹೆಚ್‍ಡಿ ಕುಮಾರಸ್ವಾಮಿ.. ಎಲ್ಲರೂ ಬೇಕು. ಮೋದಿಯವರನ್ನು ಭೇಟಿ ಮಾಡಿದರೆ ಅದು ರಾಜಕೀಯವಾಗುತ್ತದೆ ಎಂಬ ಆತಂಕ ಅಪ್ಪುಗೆ ಇತ್ತಂತೆ.