ಹಿರಿಯ ನಟಿ ತಾರಾ ಅನುರಾಧಾ ತಿರುಪತಿಗೆ ಹೋಗಿ ಪ್ರವಾಹದಲ್ಲಿ ಸಿಲುಕಿ ಅಲ್ಲಿಂದ ಬಚಾವ್ ಆಗಿ ಬಂದ ಕಥೆ ಹೇಳಿದ್ದಾರೆ. ತಿರುಪತಿಯಲ್ಲಿ ಈ ರೀತಿಯ ಪ್ರವಾಹ ಶುರುವಾಗುವ ಒಂದು ದಿನ ಮೊದಲು ತಿರುಪತಿಗೆ ಹೊರಟಿದ್ದರು. ಮಳೆ ಇತ್ತಾದರೂ ಪ್ರವಾಹದ ಭೀಕರ ಸ್ಥಿತಿ ಇರಲಿಲ್ಲ.
ಪರಿಚಯಸ್ಥರೊಬ್ಬರು ಬನ್ನಿ ಪರವಾಗಿಲ್ಲ ಎಂದರು. ನಾನು, ಅಮ್ಮ, ಮಗ, ಅಣ್ಣ, ನನ್ನ ಪಿಎ ಮತ್ತು ಡ್ರೈವರ್ ಇದ್ದರು. ತಿರುಪತಿಗೆ ಹೋಗುವ ವೇಳೆಗೆ ಕತ್ತಲಾಗಿತ್ತು. ನೀರು ಸೊಂಟದವರೆಗೆ ಇತ್ತು. ನಮಗೆ ಮಾತನಾಡಿದ್ದವರಿಗೆ ಕರೆ ಮಾಡಿದೆ. ಈಗ ರೆಡ್ ಅಲರ್ಟ್ ಘೋಷಣೆಯಾಗಿದೆ. ಅಲ್ಲಿಯೇ ಎಲ್ಲಾದರೂ ಉಳಿದುಕೊಳ್ಳಿ ಎಂದರು. ರೂಂ ಮಾಡೋಣ ಎಂದರೆ ಎಲ್ಲಿ ಮಾಡೋದು? ಯಾವ ಹೋಟೆಲ್ಲೂ ಓಪನ್ ಇಲ್ಲ. ನೀರಿನ ಸೆಳೆತ ಹೆಚ್ಚುತ್ತಾ ಹೋಯ್ತು. ನಿಂತಿದ್ದ ಕಾರುಗಳು ಕಣ್ಣೆದುರೇ ತೇಲೋಕೆ ಆರಂಭಿಸಿದವು.
ನಮ್ಮ ಕಾರೂ ತೇಲೋಕೆ ಶುರುವಾಯ್ತು. ಎಲ್ಲಿಯಾದರೂ ಸರಿ, ಸೇಫ್ ಜಾಗದಲ್ಲಿ ಕಾರು ನಿಲ್ಲಿಸಿ ಸಾಕು ಎಂದು ಡ್ರೈವರ್ಗೆ ಹೇಳಿದೆ. ಡ್ರೈವರ್ ಕೂಡಾ ಕಷ್ಟಪಟ್ಟು ಕಾರನ್ನು ಹೇಗೋ ಕಂಟ್ರೋಲ್ ಮಾಡಿಕೊಂಡು ಒಂದು ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಿದರು. ಎಷ್ಟೋ ಕಡೆ ಕಾರು ನಮ್ಮ ನಿಯಂತ್ರಣದಲ್ಲೇ ಇರಲಿಲ್ಲ. ನೀರು ಕರೆದುಕೊಂಡು ಹೋದಲ್ಲಿಗೆ ಹೋಗಿದ್ದೆವು. ಕೊನೆಗೆ ನಿಂತ ಜಾಗ ಎಲ್ಲಿ ಎಂದು ನೋಡಿದರೆ.. ಅದು ಬೆಂಗಳೂರು ಹೈವೇ. ದೇವರೇ ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದುಕೊಂಡು ಅದೇ ಹಾದಿ ಹಿಡಿದು ವಾಪಸ್ ಬಂದುಬಿಟ್ಟೆವು.