ಒಂದಲ್ಲ.. ಎರಡಲ್ಲ.. 12 ಹಾಡುಗಳು. 12ಕ್ಕೆ ಹನ್ನೆರಡೂ ಪ್ರೇಮಗೀತೆಗಳೇ.. ಒಂದೊಂದು ಹಾಡೂ ಪೇಂಯ್ಟಿಂಗ್‍ನಂತೆ ಸೊಗಸಾಗಿವೆ. ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ.. ಎಲ್ಲರೂ ಚೆಂದ ಚೆಂದ ಕಾಣಿಸುತ್ತಾರೆ. ಅಷ್ಟೂ ಹಾಡುಗಳಿಗೆ ಸಂಗೀತ ನೀಡಿರುವುದು ಸ್ವತಃ ನಿರ್ದೇಶಕ ರಾಘವೇಂದ್ರ.
ನಾನು ಸಂಗೀತ ನಿರ್ದೇಶಕನಾಗಬೇಕು ಎಂದುಕೊಂಡವನು. ಹಳೆಯ ಹಾಡುಗಳೆಂದರೆ ತುಂಬಾ ಇಷ್ಟ. ಪ್ರೀತಿಯನ್ನು ಅಭಿವ್ಯಕ್ತಿಸಲು ಹಾಡುಗಳೇ ಅತ್ಯುತ್ತಮ ಎಂದು ನಂಬಿದವನು ನಾನು. ಆದರೆ, ಚಿತ್ರದ ಕಥೆ, ಚಿತ್ರಕಥೆ ಬರೆದ ನಂತರ ಜೊತೆಗಿದ್ದವರೆಲ್ಲ ನಾನೇ ನಿರ್ದೇಶನವನ್ನೂ ಮಾಡಬೇಕು ಎಂದರು. ಹೀಗಾಗಿ ಡೈರೆಕ್ಟರ್ ಆದೆ ಎನ್ನುತ್ತಾರೆ ರಾಘವೇಂದ್ರ.
12 ಪ್ರೇಮಗೀತೆಗಳಿದ್ದರೂ ಒಂದೇ ಒಂದು ಹಾಡಿನಲ್ಲಿ ಹೀರೋ ಹೀರೋಯಿನ್ ಪರಸ್ಪರ ಟಚ್ ಕೂಡಾ ಮಾಡಲ್ಲ. ಇದು ಚಿತ್ರದ ಇನ್ನೊಂದು ಹೈಲೈಟ್. ಪ್ರೀತಿಯನ್ನು ದೇವರ ಸ್ಥಾನದಲ್ಲಿಟ್ಟು ರೂಪಿಸಿರೋ ಕಥೆಯಲ್ಲಿ ಒಂದೊಂದು ಹಾಡು ಕೂಡಾ ಹೈಲೈಟ್. ಹಾಡುಗಳ ಮೂಲಕವೇ ಚಿತ್ರದ ಕಥೆ ಸಾಗುತ್ತಾ ಹೋಗುತ್ತೆ ಎನ್ನುತ್ತಾರೆ ರಾಘವೇಂದ್ರ.
12 ಹಾಡುಗಳನ್ನು ಹರಿಹರನ್, ಸೋನು ನಿಗಮ್, ಸಾಧು ಕೋಕಿಲ, ವಿಜಯ್ ಪ್ರಕಾಶ್, ಅರ್ಮಾನ್ ಮಲಿಕ್, ಮೃದುಲಾ ವಾರಿಯರ್, ಶಹಬಾಜ್ ಅಮಾನ್, ಮೋಹಿತ್ ಚೌಹಾನ್.. ಮೊದಲಾದ ಖ್ಯಾತ ವಿಖ್ಯಾತರಿಂದಲೇ ಹಾಡಿಸಿದ್ದಾರೆ.