ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಣ್ಣಾತೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಇದೇ ದೀಪಾವಳಿಗೆ ತೆರೆ ಮೇಲೆ ಬರುತ್ತಿದೆ ಅಣ್ಣಾತೆ. ಎಸ್‍ಪಿಬಿ ಕೊನೆಯ ಬಾರಿಗೆ ಹಾಡಿರುವ ಹಾಡು ಇರೋದು ಇದೇ ಅಣ್ಣಾತೆಯಲ್ಲಿ. ರಜನಿ ಜೊತೆ ಲೇಡಿ ಸೂಪರ್ ಸ್ಟಾರ್ ನಯನತಾರಾ, ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್, ಖುಷ್‍ಬೂ ಸುಂದರ್ ಕೂಡಾ ಇದ್ದಾರೆ. ಅತ್ತ.. ಅಣ್ಣಾತೆ ರಿಲೀಸ್ ಸಂಭ್ರಮದಲ್ಲಿದ್ದರೆ, ಇತ್ತ ರಜನಿಕಾಂತ್ ಆಸ್ಪತ್ರೆ ಸೇರಿದ್ದಾರೆ.
ರಜನಿಕಾಂತ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಇದೇ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ರಜನಿ, ಚಿಕಿತ್ಸೆ ಪಡೆದ ನಂತರ ಸುದೀರ್ಘ ವಿಶ್ರಾಂತಿ ಪಡೆದಿದ್ದರು. ಅಮೆರಿಕಕ್ಕೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗಷ್ಟೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದ ರಜನಿಕಾಂತ್ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದರು.
ರಜನಿ ಆರೋಗ್ಯದ ಬಗ್ಗೆ ಗಾಬರಿ ಬೇಡ. ಅವರು ಆರೋಗ್ಯವಾಗಿದ್ದಾರೆ ಎಂದು ಕಾವೇರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.