` ಕೋಟಿಗೊಬ್ಬ ನಿರ್ಮಾಪಕರ ಮೇಲೆ ಸಲಗ ನಿರ್ಮಾಪಕರು ಸಿಟ್ಟಾಗಿದ್ದೇಕೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೋಟಿಗೊಬ್ಬ ನಿರ್ಮಾಪಕರ ಮೇಲೆ ಸಲಗ ನಿರ್ಮಾಪಕರು ಸಿಟ್ಟಾಗಿದ್ದೇಕೆ?
KP Srikanth, Soorappa Babu

ಕೋಟಿಗೊಬ್ಬ 3 ಮತ್ತು ಸಲಗ ಎರಡೂ ಚಿತ್ರಗಳು ಒಂದು ದಿನದ ಗ್ಯಾಪ್‍ನಲ್ಲಿ ರಿಲೀಸ್ ಆದವು. ಸಲಗದ ಜೊತೆಯಲ್ಲೇ ರಿಲೀಸ್ ಆಗಬೇಕಿದ್ದ  ಕೋಟಿಗೊಬ್ಬ 3 ಸಾಕಷ್ಟು ವಿವಾದಗಳನ್ನೆದುರಿಸಿ ಒಂದು ದಿನ ತಡವಾಗಿ ರಿಲೀಸ್ ಆಯಿತು. ಇದರ ಹಿಂದೆ ಕೆಲವರ ಷಡ್ಯಂತ್ರ ಇದೆ. ಅದನ್ನು ನಾವು ಆಮೇಲೆ ನೋಡಿಕೊಳ್ತೇವೆ ಎಂದು ಸ್ವತಃ ಸುದೀಪ್ ಹಾಗೂ ಜಾಕ್ ಮಂಜು ವಾರ್ನಿಂಗ್ ಕೊಟ್ಟಿದ್ದೂ ಆಯಿತು. ಜಾಕ್ ಮಂಜು ಮತ್ತು ಸುದೀಪ್ ಅಖಾಡಕ್ಕೆ ಇಳಿಯುವವರೆಗೆ ಕೋಟಿಗೊಬ್ಬ 3 ರಿಲೀಸ್ ಆಗುವ ಬಗ್ಗೆ ಗ್ಯಾರಂಟಿಯೂ ಇರಲಿಲ್ಲ. ಸೂರಪ್ಪ ಬಾಬು ಅಸಹಾಯಕರಾಗಿದ್ದರು. ಆದರೆ ವಿವಾದವೆಲ್ಲ ಬಗೆಹರಿದು ಸುಸೂತ್ರವಾಗುತ್ತಿರೋವಾಗ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಸೂರಪ್ಪ ಬಾಬು ವಿರುದ್ಧ ಕಿಡಿ ಕಾರಿದ್ದಾರೆ.

``ಸಿನಿಮಾ ಬಿಡುಗಡೆಗೆ ಮೊದಲು ನಾವೊಂದಷ್ಟು ನಿರ್ಮಾಪಕರು ಸೇರಿ ಸಕ್ರಿಯ ನಿರ್ಮಾಪಕರು ಎಂದು ಸಂಘ ಮಾಡಿಕೊಂಡಿದ್ದೆವು. ರಿಲೀಸ್ ಆಗಬೇಕಿದ್ದ ಚಿತ್ರಗಳ ನಿರ್ಮಾಪಕರಿದ್ದ ಸಂಘವದು. ಅಲ್ಲಿ ಸೂರಪ್ಪ ಬಾಬು ನಮ್ಮ ಸಿನಿಮಾ ಕಾಪಿ ಬರೋಕೆ ತಡವಾಗುತ್ತೆ. ನೀವು ಅಕ್ಟೋಬರ್ 14ಕ್ಕೆ ರಿಲೀಸ್ ಮಾಡಿ. ನಾವು ತಡವಾಗಿ ಬರುತ್ತೇವೆ ಎಂದಿದ್ದರು. ಆದರೆ ಇದ್ದಕ್ಕಿದ್ದಂತೆ ಅಕ್ಟೋಬರ್ 15ಕ್ಕೆ ರಿಲೀಸ್ ಎಂದು ಘೋಷಿಸಿಬಿಟ್ಟರು. ನಂತರ ಅದ್ಯಾರು ಹುರಿದುಂಬಿಸಿದರೋ.. ಅಕ್ಟೋಬರ್ 14ಕ್ಕೇ ಬರುತ್ತೇವೆ ಎಂದು ಅನೌನ್ಸ್ ಮಾಡಿದರು. ಸಿದ್ಧತೆಗಳೂ ಇರಲಿಲ್ಲ. ಎಲ್ಲವೂ ಫೇಲ್ ಆದಾಗ ಇನ್ನೊಬ್ಬರನ್ನು ಬೈಯೋದು ತಪ್ಪು'' ಎಂದಿದ್ದಾರೆ ಕೆ.ಪಿ.ಶ್ರೀಕಾಂತ್.

ಸೂರಪ್ಪ ಬಾಬು ಅವರ ಕಮ್ಯುನಿಕೇಷನ್ ಗ್ಯಾಪ್‍ನಿಂದಾಗಿ ಸಮಸ್ಯೆಗಳು ಸೃಷ್ಟಿಯಾಗಿವೆ ಅನ್ನೋ ಅರ್ಥ ಶ್ರೀಕಾಂತ್ ಮಾತಿನಲ್ಲಿದೆ. ವಿಶೇಷವೆಂದರೆ ಈ ಹಿಂದೆ ಅನೌನ್ಸ್ ಆಗಿದ್ದ ಡೇಟುಗಳಲ್ಲಿ  ಕೂಡಾ ಸಲಗ, ಕೋಟಿಗೊಬ್ಬ 3 ಮತ್ತು ಭಜರಂಗಿ 2 ಚಿತ್ರಗಳು, ಕ್ರಮವಾಗಿ ತಲಾ ಎರಡು ವಾರಗಳ ಅಂತರದಲ್ಲಿ ರಿಲೀಸ್ ಆಗಬೇಕೆಂದು ಒಪ್ಪಂದವೂ ಆಗಿತ್ತು.

ಇಷ್ಟೆಲ್ಲದರ ಮಧ್ಯೆಯೂ ಸಮಸ್ಯೆಯಾದಾಗ ಜಾಕ್ ಮಂಜು, ಸೈಯದ್ ಸಲಾಂ ಜೊತೆ ಹೆಗಲು ಕೊಟ್ಟಿ ನಿಂತಿದ್ದು ಕೂಡಾ ಕೆ.ಪಿ.ಶ್ರೀಕಾಂತ್ ಎಂಬುದನ್ನು ಮರೆಯುವಂತಿಲ್ಲ. ಚಿತ್ರರಂಗದ ಹಲವರ ಜೊತೆ ಶ್ರೀಕಾಂತ್ ಅವರೂ ಚಿತ್ರ ಬಿಡುಗಡೆಗೆ ಸಹಕರಿಸಿದರು ಎಂದು ಜಾಕ್ ಮಂಜು ಹೇಳಿದ್ದರು.