ಚಿತ್ರರಂಗದಲ್ಲೀಗ ಪ್ರೊಫೆಷನಲ್ ನಿರ್ಮಾಪಕರ ಸಂಖ್ಯೆ ಕಡಿಮೆ. ಚಿತ್ರರಂಗದ ಬಗ್ಗೆ ಗಂಧಗಾಳಿಯೇ ಗೊತ್ತಿಲ್ಲದೆ ಹಲವರು ಬರುತ್ತಾರೆ. ದುಡ್ಡು ಸುರಿಯುತ್ತಾರೆ. ಯಾರೋ ಲಾಭ ಮಾಡಿಕೊಳ್ಳುತ್ತಾರೆ. ಫೈನಲಿ.. ಅನುಭವವಿಲ್ಲದೆ ಬಂದವರು ಬರ್ಬಾದ್ ಆಗುತ್ತಾರೆ. ಇದೂ ಹಾಗೇನಾ..? ಗೊತ್ತಿಲ್ಲ. ಆದರೆ ಸಿನಿಮಾ ನಿರ್ಮಾಪಕನಾಗಿದ್ದ ಶಶಿಕುಮಾರ್ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿರುವುದು ಸತ್ಯ.
ಅರೆಸ್ಟ್ ಆಗಿರುವ ಶಶಿಕುಮಾರ್ ಒಂದು ಕಾಲದಲ್ಲಿ ಸಿನಿಮಾ ನಿರ್ಮಾಪಕನಾಗಿದ್ದ. ಹಾಫ್ ಮೆಂಟಲ್ ಅನ್ನೋ ಸಿನಿಮಾ ನಿರ್ಮಿಸಿದ್ದ. ಸಿನಿಮಾ ಲಾಸ್ ಆಯಿತು. ಬೇರೆ ಬಿಸಿನೆಸ್ಸುಗಳೂ ಕೈಕೊಟ್ಟವು. ನಿರ್ಮಾಪಕ ಕಿಡ್ನಾಪರ್ ಆಗಿ ಬದಲಾದ. ವಂಚಕನಾದ. ಪ್ರಕರಣ ನಡೆದಿರೋದು ಇಷ್ಟು.
ದುಡ್ಡಿಗಾಗಿ ಶಶಿಕುಮಾರ್ ಈರುಳ್ಳಿ ವ್ಯಾಪಾರಿ ಶ್ರೀನಿವಾಸ್ ಎಂಬುವವರನ್ನು ಶಶಿಕುಮಾರ್ & ಗ್ಯಾಂಗ್ ಹಾಡಹಗಲೇ ಕಿಡ್ನಾಪ್ ಮಾಡಿದೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾವು ಇನ್‍ಕಂ ಟ್ಯಾಕ್ಸ್‍ನವರು. ಕೂಡಲೇ 50 ಲಕ್ಷ ಮಡಗು ಎಂದು ಬೆದರಿಸಿದೆ. 20 ಲಕ್ಷಕ್ಕೆ ಡೀಲೂ ಕುದುರಿದೆ. ಆದರೆ 20 ಲಕ್ಷ ಪಡೆದ ಮೇಲೂ ಸುಮ್ಮನಾಗದ ಗ್ಯಾಂಗ್ ಮತ್ತೆ 5 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದೆ. ಡೌಟು ಬಂದ ಶ್ರೀನಿವಾಸ್ ಮಹಾಲಕ್ಷ್ಮಿ ಲೇಔಟ್ ಸ್ಟೇಷನ್‍ಗೆ ದೂರು ಕೊಟ್ಟಿದ್ದಾರೆ. ಈಗ ಶಶಿಕುಮಾರ್ ಅರೆಸ್ಟ್.
ಒಂದಂತೂ ಸ್ಪಷ್ಟ. ಶಶಿಕುಮಾರ್ ಚಿತ್ರರಂಗದಿಂದ ದರೋಡೆಯ ದಂಧೆಗೆ ಇಳಿದವನಂತೆ ಕಾಣುತ್ತಿಲ್ಲ. ಬದಲಿಗೆ ದರೋಡೆಯ ದಂಧೆಯಲ್ಲಿದ್ದುಕೊಂಡೇ ಚಿತ್ರರಂಗಕ್ಕೆ ಬಂದಿರಬಹುದು. ಆದರೆ.. ಸದ್ಯಕ್ಕೆ ಆತ ಆರೋಪಿಯಷ್ಟೆ