ಅಪ್ಪು ಎಂದರೆ ನನಗೆ ತುಂಬಾ ಇಷ್ಟ. ಅಣ್ಣನಾಗಿ ಹೊಗಳುತ್ತೇನೆ ಅನ್ನೋದಕ್ಕಿಂತ ಅಭಿಮಾನಿಯಾಗಿ ಹೊಗಳುತ್ತೇನೆ. ಪುನೀತ್ನನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಅವನ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡು ಕೇಳಿ ಎಮೋಷನಲ್ ಆಗಿದ್ದೇನೆ. ಅಪ್ಪು ನನ್ನ ತಮ್ಮನಾಗಿದ್ದು ನನ್ನ ಅದೃಷ್ಟ.
ಇಂಥಾದ್ದೊಂದು ಮಾತು ಹೇಳಿದ್ದು ಸ್ವತಃ ಶಿವಣ್ಣ. ಸಲಗ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದ ವೇದಿಕೆಯಲ್ಲಿ ಶಿವಣ್ಣ ಅತಿಥಿಯಾಗಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಉಪೇಂದ್ರ ಜೊತೆಗೆ ಪುನೀತ್ ಕೂಡಾ ಅತಿಥಿಯಾಗಿದ್ದರು. ಅಣ್ಣ ತಮ್ಮ ಇಬ್ಬರೂ ಒಂದೇ ಚಿತ್ರದ ಪ್ರಚಾರಕ್ಕೆ ಬರೋದು ಅಪರೂಪ. ಆ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿತ್ತು ಸಲಗ ಚಿತ್ರದ ಈವೆಂಟ್. ವೇದಿಕೆಯಲ್ಲಿದ್ದ ಎಲ್ಲರ ಕುರಿತು ಮಾತನಾಡುತ್ತಿದ್ದ ಶಿವಣ್ಣ, ತಮ್ಮನ ಬಗ್ಗೆ ಮಾತನಾಡುವಾಗ ಎಮೋಷನಲ್ ಆದರು.
ಅಪ್ಪು ರಾಯಲ್ ಆಗಿಯೇ ಹುಟ್ಟಿದ. ರಾಯಲ್ ಆಗಿಯೇ ಬೆಳೆದ. ರಾಯಲ್ ಆಗಿಯೇ ಇರ್ತಾನೆ ಅನ್ನೋ ಮೂಲಕ ಪುನೀತ್ ರಾಜ್ಕುಮಾರ್ ಬಗ್ಗೆ ಎದೆಯುಬ್ಬಿಸಿ ಮಾತನಾಡಿದರು.
ಇದೇ ವೇಳೆ ಮಾತನಾಡಿದ ಪುನೀತ್ ಸಲಗ ಚಿತ್ರವನ್ನು ದುನಿಯಾ ವಿಜಯ್ ನಿರ್ದೇಶನ ಮಾಡಿರೋದು ನನಗೆ ಉತ್ಸಾಹ ತಂದಿದೆ. ಸಲಗ ಸಿನಿಮಾ ನೋಡ್ತೇನೆ. ನನಗೆ ಶಿವಣ್ಣನ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಅನ್ನೋದು ಕನಸು. ಖಂಡಿತಾ ನೀವೆಲ್ಲ ಮೆಚ್ಚಿಕೊಳ್ಳುವಂಥಾ ಸಿನಿಮಾ ಮಾಡ್ತೇನೆ. ಸೀಟಿನ ತುದಿಯಲ್ಲಿ ಕುಳಿತು ನೋಡಬೇಕು, ಅಂತಾ ಸಿನಿಮಾ ಮಾಡ್ತೇನೆ ಎಂದರು ಪುನೀತ್.
ಅಷ್ಟೇ ವೇದಿಕೆ ಮೇಲೆ ಓಂ ಚಿತ್ರದ ಐ ಲವ್ ಯೂ ಸೀನ್ಗೆ ಶಿವಣ್ಣಗೆ ಆ್ಯಕ್ಷನ್ ಕಟ್ ಹೇಳಿದರು.