ರಾಜ್ ಮನೆತನ, ಕನ್ನಡ ಚಿತ್ರರಂಗದ ದೊಡ್ಮನೆ. ಒಂದು ಕಾಲದಲ್ಲಿ ಆ ಮನೆಯಲ್ಲಿ ನಾಲ್ವರು ಹೀರೋಗಳಿದ್ದರು. ಈಗಲೂ ನಾಲ್ವರು ಹೀರೋಗಳಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಪೋಷಕ ಪಾತ್ರಗಳತ್ತ ಸರಿದಿದ್ದಾರೆ. ಶಿವಣ್ಣ, ಪುನೀತ್, ವಿನಯ್ ರಾಜ್‍ಕುಮಾರ್ ಮತ್ತು ಯುವ ರಾಜ್‍ಕುಮಾರ್ ಹೀರೋಗಳಾಗಿದ್ದಾರೆ. ಇಷ್ಟೆಲ್ಲ ಇದ್ದ ಮನೆಯಲ್ಲಿ ಹೀರೋಯಿನ್ ಇರಲಿಲ್ಲ. ಹಾಗೆ ನೋಡಿದರೆ ರಾಜ್ ಕುಟುಂಬದಿಂದ ರಾಜ್ ಬಿಟ್ಟರೆ ಮೊದಲು ಬಣ್ಣ ಹಚ್ಚಿದ್ದು, ತೆರೆಯ ಮೇಲೆ ಕಾಣಿಸಿಕೊಂಡಿದ್ದು ಪೂರ್ಣಿಮಾ ಅವರೇ. ಆದರೆ, ಅವರು ನಾಯಕಿಯಾಗಲಿಲ್ಲ. ಶಿವರಾಜ್ ಕುಮಾರ್ ಮಕ್ಕಳು ಬಾಲ ನಟನೆಗಷ್ಟೇ ಸೀಮಿತರಾದರು. ಹೀರೋಯಿನ್ ಆಗಲಿಲ್ಲ. ಅದು ಧನ್ಯಾ ರಾಮ್‍ಕುಮಾರ್ ಮೂಲಕ ಈಡೇರಿದೆ.
ನಿನ್ನ ಸನಿಹಕೆ ಚಿತ್ರದ ಮೂಲಕ ರಾಮ್‍ಕುಮಾರ್ ಮತ್ತು ಪೂರ್ಣಿಮಾ ದಂಪತಿಯ ಮಗಳು ಧನ್ಯಾ ರಾಮ್‍ಕುಮಾರ್ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾವನ್ನು ಒರಾಯನ್ ಮಾಲ್‍ನಲ್ಲಿ ನೋಡಿದ ರಾಜ್ ಕುಟುಂಬದವರು ಚಿತ್ರವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.
ಶಿವಣ್ಣ : ಅಭಿನಯ ಅನ್ನೋದು ಅವಳ ರಕ್ತದಲ್ಲೇ ಇದೆಯೇನೋ. ಧನ್ಯಾ ಅಭಿನಯ ಇಷ್ಟವಾಯಿತು. ವಾಯ್ಸ್ ತುಂಬಾ ಚೆನ್ನಾಗಿದೆ. ಇಷ್ಟು ಚೆನ್ನಾಗಿ ಮಾಡ್ತಾಳೆ ಅನ್ನೋ ನಿರೀಕ್ಷೆ ಇರಲಿಲ್ಲ. ಸೂರಜ್ ಗೌಡ ಅವರೂ ಅದ್ಭುತವಾಗಿ ನಟಿಸಿದ್ದಾರೆ. ನಿರ್ದೇಶನದಲ್ಲೂ ಇದು ಅವರ ಮೊದಲ ಚಿತ್ರ ಅನ್ನೋ ಭಾವನೆ ಹುಟ್ಟಿಸಲ್ಲ.
ರಾಘವೇಂದ್ರ ರಾಜ್‍ಕುಮಾರ್ : ಇದು ಒಳ್ಳೆ ಫೀಲ್ ಗುಡ್ ಸಿನಿಮಾ. ನಿಮ್ಮೆಲ್ಲರ ಆಶೀರ್ವಾದ ಬೇಕು.
ಪುನೀತ್ ರಾಜ್‍ಕುಮಾರ್ : ಲೇಟ್ ಆಗಿ ಬಂದ ಕಾರಣ ನಾನು ಕಡೆಯ 10 ನಿಮಿಷ ಮಾತ್ರ ನೋಡೋಕೆ ಸಾಧ್ಯವಾಯ್ತು. ಮತ್ತೊಮ್ಮೆ ನೋಡಬೇಕು. ನಾನು ಎತ್ತಿ ಆಡಿಸಿದ ಮಗು ಧನ್ಯಾ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಇರಲಿ