ಇತ್ತೀಚೆಗೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ನಿಧನರಾಗಿದ್ದಾರೆ. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಗಾಂಧಿನಗರದಲ್ಲಿರೋ ಸಂತೃಪ್ತಿ ರೆಸಿಡೆನ್ಸಿಯಲ್ಲಿ ವಿಜಯಲಕ್ಷ್ಮಿ, ತಾಯಿ ವಿಜಯ ಸುಂದರಂ ಮತ್ತು ಅಕ್ಕ ಉಷಾ ತಂಗಿದ್ದರು. ಚೆನ್ನೈಗೆ ಹೊರಡಲು ತಯಾರಾಗುತ್ತಿದ್ದ ವೇಳೆಯಲ್ಲೇ ತಾಯಿ ನಿಧನರಾಗಿದ್ದಾರೆ. ಎಲ್ಲಿ ಸಂಸ್ಕಾರ ಮಾಡಬೇಕು, ಏನು ಮಾಡಬೇಕು ಎಂದು ತೋಚದೆ ನಿಂತಿದ್ದ ವಿಜಯಲಕ್ಷ್ಮಿ ಅವರ ನೆರವಿಗೆ ಹೋಗಿದ್ದು ಫಿಲಂ ಚೇಂಬರ್ ಮಾಜಿ ಕಾರ್ಯದರ್ಶಿ ಭಾ.ಮಾ.ಹರೀಶ್. ವಿಜಯಲಕ್ಷ್ಮಿ ಅವರಿಗೆ ಸಾಂತ್ವನ ಹೇಳಿದ್ದಲ್ಲದೆ, ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ನನ್ನ ಅಕ್ಕನಿಗೆ ಸಮಸ್ಯೆ ಇದೆ. ನನ್ನ ತಾಯಿ ಇದರಿಂದಾಗಿ ಮಾನಸಿಕವಾಗಿ ನೊಂದಿದ್ದರು. ಈಗ ಅಮ್ಮನೂ ಇಲ್ಲ. ನಾನು ಖಂಡಿತಾ ಬದಲಾಗುತ್ತೇನೆ. ಇಲ್ಲಿಯೇ ಇರುತ್ತೇನೆ. ದಯವಿಟ್ಟು ಸಹಾಯ ಮಾಡಿ. ಭಿಕ್ಷೆ ಎಂದುಕೊಂಡರೂ ಪರವಾಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.