ಕೊರೊನಾ ಭೀತಿ ದೂರವಾಗಿ, ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕೊಟ್ಟ ಬೆನ್ನಲ್ಲೇ ಚಿತ್ರರಂಗ ಚುರುಕಾಗಿದೆ. ಅಕ್ಟೋಬರ್ 1ರಿಂದಲೇ 100% ಪ್ರೇಕ್ಷಕರಿಗೆ ಅವಕಾಶ ಸಿಕ್ಕರೂ, ಅಕ್ಟೋಬರ್ 14ರಿಂದ ಸ್ಟಾರ್ ಚಿತ್ರಗಳು ಎಂಟ್ರಿ ಕೊಡಲಿವೆ.
ಅಕ್ಟೋಬರ್ 14ಕ್ಕೆ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಒಟ್ಟಿಗೇ ರಿಲೀಸ್ ಆಗಲಿವೆ. ಶಿವಣ್ಣ ಅಭಿನಯದ ಭಜರಂಗಿ 2, ತಿಂಗಳ ಕೊನೆಗೆ ಅಕ್ಟೋಬರ್ 29ಕ್ಕೆ ಬರಲಿದೆ. ಅಕ್ಟೋಬರ್ 8ಕ್ಕೆ ಧನ್ಯಾ ರಾಮ್‍ಕುಮಾರ್ ಅಭಿನಯದ ಮೊದಲ ಸಿನಿಮಾ ನಿನ್ನಾ ಸನಿಹಕೆ ರಿಲೀಸ್ ಆಗುತ್ತಿದೆ.
ಸಲಗ ಮತ್ತು ಕೋಟಿಗೊಬ್ಬ 3 ಒಟ್ಟಿಗೇ ಬಂದರೆ ಸಮಸ್ಯೆಯಾಗುವುದಿಲ್ಲವೇ? ಥಿಯೇಟರ್ ಸಮಸ್ಯೆ ಎದುರಾಗುವುದಿಲ್ಲವೇ? ಸುದೀಪ್ ಮತ್ತು ದುನಿಯಾ ವಿಜಿ ಫ್ಯಾನ್ಸ್ ಮಧ್ಯೆ ಜಟಾಪಟಿ ಆಗುವುದಿಲ್ಲವೇ? ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿದೆ.
ಸುದೀಪ್ ಮೊದಲಿನಿಂದಲೂ ನಮಗೆ ಸಪೋರ್ಟಿವ್ ಆಗಿದ್ದಾರೆ. ಮೊದಲು ನಮ್ಮ ಸಿನಿಮಾ ರಿಲೀಸ್ ಆಗಬೇಕಿತ್ತು. ಸೂರಪ್ಪ ಬಾಬು ಅದೇಕೆ ಪ್ಲಾನ್ ಬ್ರೇಕ್ ಮಾಡಿದರೋ ಗೊತ್ತಿಲ್ಲ. ನಾವಂತೂ ಅಕ್ಟೋಬರ್ 14ಕ್ಕೆ ಬರೋದು ಪಕ್ಕಾ ಎಂದಿದ್ದಾರೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್.
ಸುದೀಪ್ ದೊಡ್ಡ ವ್ಯಕ್ತಿ. ದೊಡ್ಡತನ ಇರುವವರು. ಒಂದೇ ದಿನ ಸಿನಿಮಾ ರಿಲೀಸ್ ಆದರೆ ಅದೇನೂ ದೊಡ್ಡ ಸಮಸ್ಯೆ ಅಲ್ಲ. ಸ್ಟಾರ್ ವಾರ್ ಬೇಡ. ಸುದೀಪ್ ಮೊದಲಿನಿಂದಲೂ ನಮಗೆ ಸಪೋರ್ಟ್ ಮಾಡುತ್ತಲೇ ಬಂದಿದ್ದಾರೆ ಎಂದಿದ್ದಾರೆ ಸಲಗ ಚಿತ್ರದ ನಾಯಕ ಮತ್ತು ನಿರ್ದೇಶಕ ದುನಿಯಾ ವಿಜಿ.
ಅತ್ತ ಕಿಚ್ಚ ಸುದೀಪ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.