ಚಿತ್ರರಂಗದ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಚಿತ್ರಮಂದಿರಗಳಲ್ಲ 100% ಪ್ರೇಕ್ಷಕರ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಅಲ್ಲಿಗೆ ಅಕ್ಟೋಬರ್ 1ರಿಂದ ಸ್ಟಾರ್ ಚಿತ್ರಗಳು ರಿಲೀಸ್ ಆಗಬಹುದು.ಆದರೆ.. ಎಲ್ಲವೂ ಸಲೀಸಾಗಿಲ್ಲ. ಏಕೆಂದರೆ ಹಲವಾರು ಷರತ್ತುಗಳಿವೆ.
100% ಅವಕಾಶ ಕೊಟ್ಟರೂ ನೈಟ್ ಕರ್ಫ್ಯೂ ಮುಂದುವರೆಸಿದೆ. ಆದರೆನೈಟ್ ಕರ್ಫ್ಯೂ ರಾತ್ರಿ 9 ಗಂಟೆಯ ಬದಲು ರಾತ್ರಿ 10 ಗಂಟೆಯಿಂದ ಇರಲಿದೆ. ವೀಕೆಂಡ್ ಕರ್ಫ್ಯೂ ಇರಲ್ಲಎನ್ನುವುದು ಚಿತ್ರರಂಗದ ಪಾಲಿಗೆ ಗುಡ್ ನ್ಯೂಸ್.
ಹಾಗಂತ ಆತಂಕಗಳೂ ತಪ್ಪಿಲ್ಲ. ಸದ್ಯಕ್ಕೆ ರಾಜ್ಯದೆಲ್ಲೆಡೆ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆಯೇ ಇದೆ. ಆದರೆ, ಅಕಸ್ಮಾತ್ ಪಾಸಿಟಿವ್ ರೇಟ್ ಶೇ.1ಕ್ಕಿಂತ ಹೆಚ್ಚಾದರೆ ತಕ್ಷಣ ಚಿತ್ರಮಂದಿರಗಳಿಗೆ ಶೇ.50ರಷ್ಟು ನಿರ್ಬಂಧ ಅನ್ವಯವಾಗಲಿದೆ. ಅಷ್ಟೇ ಅಲ್ಲ, ಪಾಸಿಟಿವಿಟಿ ದರವೇನಾದರೂ ಶೇ.2ರ ಹಂತ ತಲುಪಿದರೆ ಚತ್ರಮಂದಿರಗಳು ಕಂಪ್ಲೀಟ್ ಬಂದ್ ಆಗಲಿವೆ.
ಇನ್ನು ಥಿಯೇಟರಿಗೆ ಬರುವವರು ಕನಿಷ್ಠ 1 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. ಇದನ್ನು ಚಿತ್ರಮಂದಿರಗಳ ಮಾಲೀಕರು ಮತ್ತು ಸಿಸ್ಟಂ ಹೇಗೆ ನಿಭಾಯಿಸಲಿದೆ ಅನ್ನೋ ಕುತೂಹಲವಿದೆ.
ಸೆಕೆಂಡ್ ಶೋ, ಮಲ್ಟಿಪ್ಲೆಕ್ಸ್ಗಳಿಗೆ ಪ್ರಾಬ್ಲಂ : ಒಂದು ಕಡೆ ಅವಕಾಶ ಕೊಟ್ಟು, ಇನ್ನೊಂದು ಕಡೆ ಬ್ರೇಕ್ ಹಾಕಿತಾ ಸರ್ಕಾರ? ಎನ್ನುವ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ. ಸದ್ಯಕ್ಕೇನೋ ರಾಜ್ಯದಲ್ಲಿ ಸೆಕೆಂಡ್ ಶೋ ಶುರುವಾಗುವುದು ರಾತ್ರಿ 7ರಿಂದ 7.30ರ ಮಧ್ಯೆ. ಕೆಲವೆಡೆ 8 ಗಂಟೆಗೆ ಶೋ ಶುರುವಾಗುತ್ತವೆ. ಈಗ ರಾತ್ರಿ 10ರಿಂದಲೇ ನೈಟ್ ಕರ್ಫ್ಯೂ ಎಂದರೆ ಶೋಗಳು 7 ಗಂಟೆಗೇ ಶುರುವಾಗಬೇಕು. ಕನಿಷ್ಠ 9.30ರೊಳಗೆ ಮುಗಿಯಬೇಕು.
ಇದರಿಂದ ಹೊಡೆತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಕಡಿಮೆ. ಆದರೆ, ಮಲ್ಟಿಪ್ಲೆಕ್ಸುಗಳಲ್ಲಿ ರಾತ್ರಿ 8, 8.30, 9, 10 ಗಂಟೆ, 11 ಗಂಟೆಗೂ ಶೋಗಳಿದ್ದವು. ಅವುಗಳಿಗೆಲ್ಲ ಈಗ ಕಂಪ್ಲೀಟ್ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಚಿತ್ರೋದ್ಯಮ ಸಿನಿಮಾ ಶೋಗಳನ್ನು 10ಗಂಟೆಯೊಳಗೆ ಮುಗಿಸುವ ಅನಿವಾರ್ಯತೆಯಲ್ಲಿ ಸಿಲುಕಿದೆ.
ಇದೆಲ್ಲದರ ಮಧ್ಯೆಯೂ ಇದು ಚಿತ್ರರಂಗ ಒಂದಿಷ್ಟು ರಿಲ್ಯಾಕ್ಸ್ ಆಗುವಂತೆ ಮಾಡಿರುವುದು ಸುಳ್ಳಲ್ಲ. ರಿಲೀಸ್ ಆಗೋಕೆ ರೆಡಿ ಇರುವ ಸಲಗ, ಭಜರಂಗಿ 2, ಕೋಟಿಗೊಬ್ಬ 3ಯಂತ ಸ್ಟಾರ್ ಸಿನಿಮಾಗಳು ಅಕ್ಟೋಬರ್ನಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.