13/09/2021ರ ದಿನ ಇಡೀ ರಾಜ್ಯದಲ್ಲಿ ದಾಖಲಾದ ಕೊರೊನಾ ಕೇಸುಗಳ ಸಂಖ್ಯೆ ಒಟ್ಟಾರೆ 673. ಬೆಂಗಳೂರು(214) ಮತ್ತು ದ.ಕನ್ನಡ(115) ಮಾತ್ರವೇ ಮೂರಂಕಿ ಕೇಸ್ ದಾಟಿರುವ ಜಿಲ್ಲೆಗಳು. ಇದು 2ನೇ ಅಲೆಯಲ್ಲೇ ಅತ್ಯಂತ ಕಡಿಮೆ ಕೇಸ್ ಎನ್ನುವುದೂ ಒಂದು ದಾಖಲೆ. ಆದರೆ.. ಈಗಲೂ ಸಿನಿಮಾಗಳಿಗೆ, ಚಿತ್ರಮಂದಿರಗಳಿಗೆ ನಿರ್ಬಂಧ ಮುಂದುವರಿಯುತ್ತಿದೆ.
ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಮಗಳ ಮದುವೆ ನಡೆಯಿತು. ಖುದ್ದು ಮುಖ್ಯಮಂತ್ರಿಗಳೇ ಭಾಗವಹಿಸಿದ್ದರು. ಸಾವಿರಾರು ಜನ ಸೇರಿದ್ದ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ಯಾರೂ ಕೂಡಾ ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸ್.. ಇತ್ಯಾದಿಗಳನ್ನು ಫಾಲೋ ಮಾಡಿರಲಿಲ್ಲ. ಆದರೂ.. ಸಾವಿರಾರು ಜನ ಸೇರುವ ಮದುವೆಗಳಿಗೆ ನಿರ್ಬಂಧವಿಲ್ಲ. ಎಲ್ಲ ನಿಯಮಗಳನ್ನು ಈಗಲೂ.. ಈ ಕ್ಷಣಕ್ಕೂ ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಿರುವ ಚಿತ್ರಮಂದಿರಗಳಿಗೆ ಶೇ.50ರ ನಿರ್ಬಂಧ ಮತ್ತು ನೈಟ್ ಕಫ್ರ್ಯೂ ಬಿಸಿ. ರಾತ್ರಿ 8.30ಕ್ಕೆ ಚಿತ್ರಮಂದಿರಗಳು ಬಾಗಿಲು ಮುಚ್ಚಬೇಕು.
ಹೊರಗೆ ಬಂದರೆ ಎಲ್ಲ ಬಾರು, ಪಬ್, ರೆಸ್ಟೋರೆಂಟ್ ಓಪನ್ನಾಗಿಯೇ ಇರುತ್ತವೆ. ರಾಜಕಾರಣಿಗಳ ಸಭೆ, ಸಮಾರಂಭ, ಎಲೆಕ್ಷನ್ ಪ್ರಚಾರ, ಕೇಂದ್ರದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ಅದ್ಧೂರಿ ಮೆರವಣಿಗೆ, ನಾಯಕರನ್ನು ಹೊತ್ತು ಕುಣಿಯುವ ನಾಯಕರು.. ಈ ಯಾವ ಕಾರ್ಯಕ್ರಮದಲ್ಲೂ ಕೊರೊನಾ ನಿಯಮ ಪಾಲನೆಯಾಗಲ್ಲ. ಅಲ್ಲಿ ಫುಲ್ ಪರ್ಮಿಷನ್. ಆದರೆ.. ಚಿತ್ರಮಂದಿರಗಳಿಗೆ ಮಾತ್ರ ತಜ್ಞರು ಹೇಳಿದಂತೆ ಕೇಳುತ್ತಾರಂತೆ.
ಇತ್ತೀಚೆಗೆ ಸುವರ್ಣ ನ್ಯೂಸ್‍ನ ಕಾರ್ಯಕ್ರಮದಲ್ಲಿ ಹಿರಿಯ ನಟ ಶಿವಣ್ಣ, ಸಿಎಂ ಎದುರು ಚಿತ್ರಮಂದಿರಗಳ ಪರವಾಗಿ ದನಿಯೆತ್ತಿದಾಗ, ತಜ್ಞರ ಬಳಿ ಚರ್ಚಿಸಿ ಪರಿಶೀಲಿಸುತ್ತೇವೆ ಎಂದೇನೋ ಸಿಎಂ ಹೇಳಿದರು. ಈಗಲೂ.. ಈ ಕ್ಷಣಕ್ಕೂ ಅರ್ಥವಾಗದ ಸಂಗತಿಯೆಂದರೆ, ಮೇಲೆ ಹೇಳಿದ ಕೊರೊನಾ ರೂಲ್ಸ್‍ಗಳನ್ನು ನಯಾಪೈಸೆಯಷ್ಟೂ ಫಾಲೋ ಮಾಡದವರಿಗೆ ಸಡಿಲ ಬಿಡುವಂತೆ ತಜ್ಞರು ಹೇಳಿದ್ದಾರಾ..?
ಮುಖ್ಯಮಂತ್ರಿಗಳು ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕಾದ್ದು ಇಷ್ಟೆ, ಚಿತ್ರಮಂದಿರಗಳ ಬಾಗಿಲು ತೆರೆಯಲು ಪೂರ್ಣ ಪ್ರಮಾಣದ ಅನುಮತಿ ಕೇಳುತ್ತಿರುವುದು ರಾಜಕಾರಣಿಗಳಂತೆ ಮೋಜು ಮಾಡೋಕೂ ಅಲ್ಲ. ಸಂಪತ್ತಿನ ಪ್ರದರ್ಶನಕ್ಕೂ ಅಲ್ಲ. ಚಿತ್ರಮಂದಿರಗಳನ್ನು ನಂಬಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಒಂದೂವರೆ ವರ್ಷದಿಂದ ನರಳುತ್ತಿರುವ ಚಿತ್ರರಂಗಕ್ಕೆ ದುಡಿಮೆ ಮಾಡೋಕೂ ಅವಕಾಶ ಕೊಡದೆ ಕಟ್ಟಿಹಾಕಿರುವ ಸರ್ಕಾರ, ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ?