ರಾಕಿಂಗ್ ಸ್ಟಾರ್ ಯಶ್, ಡೈರೆಕ್ಟರ್ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ನ 2021ರ ಭಾರಿ ನಿರೀಕ್ಷೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2. ಈ ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ ಸ್ಯಾಟಲೈಟ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಜೀ ನೆಟ್ ವರ್ಕ್ ನ 4 ದಕ್ಷಿಣದ ಚಾನೆಲ್ ಗಳು ಕೆಜಿಎಫ್ ರೈಟ್ಸ್ ಖರೀದಿಸಿವೆ. ಥಿಯೇಟರಿನಲ್ಲಿ ರಿಲೀಸ್ ಆದ ನಂತರ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಯ ಝೀ ಗ್ರೂಪ್ ಚಾನೆಲ್ಲುಗಳಲ್ಲಿ ಸಿನಿಮಾ ಪ್ರಸಾರವಾಗಲಿದೆ. ಹಿಂದಿಯದ್ದು ಮಾತ್ರ ಬೇರೆಯವರಿಗೆ ಹೋಗಲಿದೆ.
ಜೀ ಎಂಟರ್ ಪ್ರೈಸಸ್ ಲಿಮಿಟೆಡ್(ಜೀಲ್)ನ ಇ.ವಿ.ಪಿ ಅಂಡ್ ಕ್ಲಸ್ಟರ್ ಹೆಡ್ ಸೌಥ್ ಬ್ಯುಸಿನೆಸ್ ಸಿಜು ಪ್ರಭಾಕರನ್, ಕೆಜಿಎಫ್ ಚಾಪ್ಟರ್ 2 ಟಿ.ವಿ. ಪ್ರಸಾರ ಹಕ್ಕುಗಳನ್ನು ದಕ್ಷಿಣದ ಎಲ್ಲ 4 ಭಾಷೆಗಳಲ್ಲೂ ಪಡೆದುಕೊಳ್ಳುವ ಮೂಲಕ ದೇಶದ ಅತ್ಯಂತ ನಿರೀಕ್ಷೆಯ ಚಲನಚಿತ್ರವನ್ನು ದಕ್ಷಿಣದ ಪ್ರತಿ ಸ್ಕ್ರೀನ್ ಗೆ ತರುವುದಕ್ಕೆ ನಾವು ಬಹಳ ಥ್ರಿಲ್ ಆಗಿದ್ದೇವೆ’’ ಎಂದಿದ್ದಾರೆ.
ಜೀ ಕನ್ನಡ ಮತ್ತು ಜೀ ಪಿಚ್ಚರ್ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ದೇಶದ ಅತ್ಯಂತ ನಿರೀಕ್ಷೆಯ ಚಲನಚಿತ್ರದೊಂದಿಗೆ ನಮ್ಮ ಸಹಯೋಗಕ್ಕೆ ಬಹಳ ಸಂತೋಷ ಮತ್ತು ಉತ್ಸಾಹ ಹೊಂದಿದ್ದೇವೆ ಮತ್ತು ವೀಕ್ಷಕರು ಮತ್ತು ವ್ಯಾಪಾರಗಳಿಂದ ನಮ್ಮ ಎಲ್ಲ ನಿರೀಕ್ಷೆಗಳನ್ನೂ ಮೀರುತ್ತದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೀ ಜೊತೆಗಿನ ಸಂಬಂಧಕ್ಕೆ ಬೇರೆಯದ್ದೇ ಮೌಲ್ಯ ಎಂದಿದ್ದಾರೆ ಪ್ರಶಾಂತ್ ನೀಲ್. ಪ್ರೇಕ್ಷಕರ ನಿರೀಕ್ಷೆ ಖಂಡಿತಾ ವ್ಯರ್ಥವಾಗಲ್ಲ ಅನ್ನೋ ಭರವಸೆಯನ್ನೂ ಕೊಟ್ಟಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರು ಜೀ ಮೂಲಕ ಜಗತ್ತಿನ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ಕೊಡುತ್ತಿದ್ದೇವೆ ಎಂಬ ಕಾನ್ಫಿಡೆನ್ಸ್ನಲ್ಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, “ಕೆಜಿಎಫ್ 2ಗೆ ನನ್ನ ಹೃದಯದಲ್ಲಿ ಅತ್ಯಂತ ವಿಶೇಷ ಸ್ಥಾನವಿದೆ. ನನ್ನ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಮದೂರು ಮತ್ತು ನಾನು ಅತ್ಯಂತ ವಿಭಿನ್ನವಾದ ಮನರಂಜನೆ ನೀಡಬೇಕು ಎಂಬ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಇಷ್ಟೆಲ್ಲ ಸದ್ದು ಮಾಡಿರೋ ಚಿತ್ರ ಎಷ್ಟು ಕೋಟಿಗೆ ಸೇಲ್ ಆಗಿರಬಹುದು. ಮೂಲಗಳ ಪ್ರಕಾರ ಚಿತ್ರದ ಸ್ಯಾಟಲೈಟ್ ಹಕ್ಕು 35 ಕೋಟಿ. ಆದರೆ, ಇದು ಕೇವಲ ಕನ್ನಡಕ್ಕಾ ಅಥವಾ ನಾಲ್ಕೂ ಭಾಷೆಯ ಟಿವಿ ಹಕ್ಕುಗಳಿಗಾ ಅನ್ನೋದು ಸ್ಪಷ್ಟವಾಗಿಲ್ಲ. ಇಷ್ಟು ಹಣಕ್ಕೇ ಮಾರಾಟವಾಯಿತು ಎಂಬ ಅಧಿಕೃತ ಸುದ್ದಿಯಂತೂ ಇನ್ನೂ ಬಂದಿಲ್ಲ.