ಲವ್ ಯೂ ರಚ್ಚು ಚಿತ್ರ ಮೊದಲು ಸುದ್ದಿಯಾಗಿದ್ದು ಚಿತ್ರದ ಚೆಂದದ ಟೈಟಲ್ಲು, ಲುಕ್.. ಇತ್ಯಾದಿಗಳಿಗೆ. ಆದರೆ ಆಗಸ್ಟ್ 9ನೇ ತಾರೀಕು ನಡೆದ ದುರಂತ, ಫೈಟರ್ ವಿವೇಕ್ ದುರ್ಮರಣ ಚಿತ್ರತಂಡಕ್ಕೂ ಶಾಕ್. ಇಷ್ಟಕ್ಕೂ ಆಗಿದ್ದೇನು?
ದುರಂತಕ್ಕೆ ಕಾರಣ ಸಾಹಸ ನಿರ್ದೇಶಕ ವಿನೋದ್ ಅಲ್ಲ, ಚಿತ್ರತಂಡದಲ್ಲಿದ್ದ ಯಾವೊಬ್ಬ ಸಾಹಸ ಕಲಾವಿದರೂ ಅಲ್ಲ. ಬದಲಿಗೆ ಇದೆಲ್ಲ ಆಗಿದ್ದು ಕ್ರೇನ್ ಆಪರೇಟರ್‍ನಿಂದ. ಬಿಡದಿಯ ಜೋಗಯ್ಯನ ಪಾಳ್ಯದಲ್ಲಿ ನಡೆಯುತ್ತಿದ್ದ ಶೂಟಿಂಗ್‍ನಲ್ಲಿ ರೋಪ್ ಸ್ಟಂಟ್ ಇತ್ತು. ದುರದೃಷ್ಟವಶಾತ್ ಅದು ಹೈಟೆನ್ಷನ್ ವೈರ್ ಕೆಳಗೆ ನಡೆಯುತ್ತಿದ್ದ ಸಾಹಸ. ಆ ವೇಳೆ ಕ್ರೇನ್ ಆಪರೇಟರ್, ಕ್ರೇನ್‍ನ್ನು ಮರಕ್ಕೆ ಟಚ್ ಮಾಡಿದ್ದ. ಆಗ ಅವನಿಗೆ ವಾರ್ನಿಂಗ್ ಕೊಡಲಾಗಿತ್ತು. ಕೊನೆಗೆ ಆತ ವೈರ್‍ಗೆ ಟಚ್ ಮಾಡಿಬಿಟ್ಟ. ಅದು 11 ಕೆವಿ ವಿದ್ಯುತ್ ಲೇನ್. ಆಗ ಕ್ರೇನ್‍ಗೆ ತಗುಲಿದ್ದ ಕರೆಂಟ್, ವಿವೇಕ್ ಮತ್ತು ರಂಜಿತ್ ಇಬ್ಬರಿಗೂ ಟಚ್ ಆಯ್ತು. ರಂಜಿತ್ ಅದೃಷ್ಟ ಚೆನ್ನಾಗಿತ್ತು. ಕರೆಂಟ್ ಹೊಡೆದರೂ ಬದುಕುಳಿದರು. ವಿವೇಕ್ ಅಲ್ಲಿಯೇ ಮೃತಪಟ್ಟರು. ಇದು ರಂಜಿತ್ ಹೇಳಿರುವ ಘಟನೆಯ ವಿವರ.
ಸದ್ಯಕ್ಕೆ ಚಿತ್ರದ ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್, ಟ್ರೇನ್ ಆಪರೇಟರ್ ಮಾದೇಶ (ಮುನಿಯಪ್ಪ) ಹಾಗೂ ಜಮೀನಿನ ಮಾಲೀಕ ಪುಟ್ಟರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯೇ ನ್ಯಾಯಾಧೀಶರ ಎದುರು ಹಾಜರು ಪಡಿಸಿ ವಿಚಾರಣೆ ಆರಂಭಿಸಿದ್ದಾರೆ.
ನಿರ್ಮಾಪಕ ಗುರು ದೇಶಪಾಂಡೆ ಸ್ಥಳದಲ್ಲಿ ಇರಲಿಲ್ಲ. ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಹೆಜ್ಜೆ ಇಡುತ್ತೇನೆ ಎಂದಿದ್ದಾರೆ ಗುರು ದೇಶಪಾಂಡೆ.