ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ಮೇಲೆ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಗೆ ತಮ್ಮ ಪುತ್ರ, ಸ್ನೇಹಿತರು, ಬಳಗದವರನ್ನೆಲ್ಲ ಸದಸ್ಯರನ್ನಾಗಿ ಮಾಡಿದ್ದ ಆರೋಪ ಹೊತ್ತಿದ್ದರು ಸುನಿಲ್ ಪುರಾಣಿಕ್. ಚಿತ್ರರಂಗದ ಸೀನಿಯರುಗಳೆಲ್ಲ ಮಾತನಾಡಿದ್ದರು. ಅದು ಮಾತು ಮಾತಲ್ಲೇ ಮುಗಿದು ಹೋಯ್ತು. ಈಗ ಅವರ ವಿರುದ್ಧ ಕೇಳಿ ಬಂದಿರೋದು ವಂಚನೆಯ ಆರೋಪ. ದುರ್ಬಳಕೆಯ ಆರೋಪ. ಅದೂ ಎರಡೂವರೆ ಕೋಟಿಯ ವಂಚನೆ ಆರೋಪ.
ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ನಲ್ಲಿ ಅಕಾಡೆಮಿ ಅಧ್ಯಕ್ಷರಾಗಿದ್ದ ಸುನಿಲ್ ಪುರಾಣಿಕ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡಿದ ಗಾಯಕರಿಗೆ, ಕೇವಲ ಐವರು ಗಾಯಕರಿಗೆ 13 ಲಕ್ಷ, 75 ಸಾವಿರ ಬಿಲ್ ಮಾಡಿದ್ದಾರೆ. ಅಂದರೆ ಪ್ರತಿಯೊಬ್ಬ ಗಾಯಕರಿಗೆ 3 ಲಕ್ಷಕ್ಕೂ ಹೆಚ್ಚು ಹಣ. ಅದೂ ನಾಡಗೀತೆ ಹಾಡುವುದಕ್ಕೆ ಮಾತ್ರ.
ಇನ್ನು ಕಾರ್ಯಕ್ರಮದಲ್ಲಿ ಒಂದು ಊಟಕ್ಕೆ ಮಾಡಿರುವ ಬಿಲ್ 820 ರೂ. ಊಟ ಮಾತ್ರ ನಾರ್ಮಲ್. ಬಿಲ್ ಇಂಟರ್‍ನ್ಯಾಷನಲ್.
ಕುಳಿತುಕೊಳ್ಳೋಕೆ ವ್ಯವಸ್ಥೆ ಮಾಡಿದ್ದ ಪ್ಲಾಸ್ಟಿಕ್ ಚೇರುಗಳಿಗೆ ಕೂಡಾ 820 ರೂ. ಬಾಡಿಗೆ. ದಿನಕ್ಕೆ.
ಇವುಗಳನ್ನೆಲ್ಲ ಆರೋಪ ಮಾಡಿರುವುದು ನಿರ್ಮಾಪಕ ಮದನ್ ಪಟೇಲ್. ಆರೋಪಕ್ಕಷ್ಟೇ ಸೀಮಿತರಾಗಿಲ್ಲ. ಎಸಿಬಿಗೆ ದೂರು ನೀಡಿದ್ದಾರೆ.
ಫಿಲಂ ಫೆಸ್ಟಿವಲ್ ಹೊರತುಪಡಿಸಿಯೇ ಅಕಾಡೆಮಿಗೆ 18 ಕೋಟಿ ಕೇಳಿ, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಬೈದ ಮೇಲೆ 12 ಕೋಟಿಗೆ ಇಳಿಸಿ ಮತ್ತೆ ಮನವಿ ಕೊಟ್ಟು, ಮತ್ತೆ ಆಗ ಸಿಎಂ ಆಗಿದ್ದ ಯಡಿಯೂರಪ್ಪರಿಂದ ಬೈಸಿಕೊಂಡಿದ್ದರು ಸುನಿಲ್ ಪುರಾಣಿಕ್. ಅದನ್ನು ವಿಧಾನಸೌಧದ ಗೋಡೆಗಳು ಈಗಲೂ ಮಾತನಾಡುತ್ತವೆ. ಈಗ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿನ ಎರಡೂವರೆ ಕೋಟಿ ವಂಚನೆ ಆರೋಪವೂ ಅವರ ತಲೆಗೇರಿದೆ.