ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದು ಯಾವಾಗ ಎಂದು ಅಭಿಮಾನಿಗಳು ಚಾತಕಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಅತ್ತ.. ಕೆಜಿಎಫ್ ಟೀಂ, ಪ್ರೇಕ್ಷಕರನ್ನು ಇನ್ನಷ್ಟು ಮತ್ತಷ್ಟು ಕುತೂಹಲಿಗಳಾಗುವಂತೆ ಮಾಡುತ್ತಿದೆ. ಏಕೆಂದರೆ ಯಶ್, ಸಂಜಯ್ ದತ್, ಪ್ರಕಾಶ್ ರೈ, ರವೀನಾ ಟಂಡನ್, ಮಾಳವಿಕಾ.. ಮೊದಲಾದವರಿದ್ದ ಟೀಂಗೆ ಈಗ ಸೀನಿಯರ್ ನಟಿಯರಾದ ಸುಧಾರಾಣಿ ಮತ್ತು ಶೃತಿ ಎಂಟ್ರಿ ಕೊಟ್ಟಿದ್ದಾರೆ.
ತೆರೆಯ ಮೇಲೆ ರವೀನಾ ಟಂಡನ್ ಪ್ರಧಾನಿ ರಮಿಕಾ ಸೇನ್ ಪಾತ್ರ ಮಾಡಿದ್ದಾರಷ್ಟೇ. ಆ ಪಾತ್ರಕ್ಕೆ ಕನ್ನಡದಲ್ಲಿ ಶಕ್ತಿ ತುಂಬಿರುವುದು ಸುಧಾರಾಣಿ ಅವರ ಕಂಠ. ತೆಲುಗಿನ ಈಶ್ವರಿ ರಾವ್ ನಟಿಸಿರುವ ಪಾತ್ರಕ್ಕೆ ನಟಿ ಶೃತಿ ಧ್ವನಿ ನೀಡಿದ್ದಾರೆ. ಈ ಮೂಲಕ ಹೊಂಬಾಳೆಯ ರತ್ನವಾಗುತ್ತಿರುವ ಕೆಜಿಎಫ್ ಚಿತ್ರಕ್ಕೆ ಇನ್ನೊಂದು ಮುತ್ತು ಜೋಡಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.