ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಆತ್ಮೀಯ ಮಿತ್ರರು. 2016ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಶುರುವಾದ ಗೆಳೆತವನ ಅದು. ರಕ್ಷಿತ್ ಶೆಟ್ಟಿ ವೃತ್ತಿ ಜೀವನದ ಅತಿದೊಡ್ಡ ಹಿಟ್ ಕಿರಿಕ್ ಪಾರ್ಟಿ ಚಿತ್ರಕ್ಕೂ ಬಂಡವಾಳ ಹೂಡಿದ್ದವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ರಕ್ಷಿತ್ ಶೆಟ್ಟಿಯ ಪ್ರತಿ ಪ್ರಾಜೆಕ್ಟ್‍ನಲ್ಲೂ ಪುಷ್ಕರ್ ಹೆಸರು ಇರುತ್ತಿತ್ತು. ಅವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡಿದ್ದೇ ಅವನೇ ಶ್ರೀಮನ್ನಾರಾಯಣ.
ಅವನೇ ಶ್ರೀಮನ್ನಾರಾಯಣ, ದೊಡ್ಡ ಬಜೆಟ್ಟಿನಲ್ಲಿ ತಯಾರಾಗಿದ್ದ ಚಿತ್ರ. ದೊಡ್ಡ ಮಟ್ಟದ ನಿರೀಕ್ಷೆಯೂ ಇತ್ತು. ಚಿತ್ರದ ಖರ್ಚಿನಲ್ಲಿ ಧಾರಾಳಿಯಾಗಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಚಿತ್ರದ ಪ್ರಮೋಷನ್‍ನ್ನೂ ದೊಡ್ಡದಾಗಿಯೇ ಮಾಡಿದರು. ಆದರೆ, ಚಿತ್ರ ಪ್ರೇಕ್ಷಕರಿಗೆ ರುಚಿಸಲೇ ಇಲ್ಲ. ಲಾಸ್ ಆಯಿತು.
ರಕ್ಷಿತ್ ಶೆಟ್ಟಿ ಪ್ರಕಾರ `ಅವನೇ ಶ್ರೀಮನ್ನಾರಾಯನ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುಯನ್ನ ಬಡ್ಡಿಗೆ ಸಾಲ ತಂದು ಹಾಕಿದ್ದರು. ಹೀಗಾಗಿ ಲಾಸ್ ಆಯಿತು. ಇಲ್ಲದೇ ಇದ್ದರೆ ಲಾಸ್ ಆಗುತ್ತಿರಲಿಲ್ಲ. ನಾನೂ 3 ವರ್ಷ ಚಿತ್ರಕ್ಕೆ ಶ್ರಮ ಹಾಕಿದ್ದೆ. ಸಿನಿಮಾ ಓಡಲಿಲ್ಲ ಎಂದ ಮಾತ್ರಕ್ಕೆ ಸಿನಿಮಾ ಬಗ್ಗೆ ಲೂಸ್ ಟಾಕ್ ಮಾಡ್ತಾನೆ ಅಂದ್ರೆ ಆತನಿಗೆ ಸಿನಿಮಾ ಬಗ್ಗೆ ಪ್ರೀತಿ ಇರಲಿಲ್ಲ ಎಂದೇ ಅರ್ಥ. ಹೀಗಾಗಿ ಆತನ ಜೊತೆಗಿನ ಸಂಬಂಧ ಕಡಿದುಕೊಂಡಿದ್ದೇವೆ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಅವನೇ ಶ್ರೀಮನ್ನಾರಾಯಣ ಚಿತ್ರದ ಲಾಸ್ 20 ಕೋಟಿಯನ್ನು ಸಾಲ ಮಾಡಿ ತಂದುಕೊಟ್ಟಿದ್ದೇನೆ. ಚಾರ್ಲಿ 777 ಚಿತ್ರಕ್ಕೆ ಹೂಡಿದ್ದ ಮೂರೂವರೆ ಕೋಟಿ ಹಾಗೂ ಸಪ್ತಸಾಗರದಾಚೆಯೆಲ್ಲೋ ಚಿತ್ರದಲ್ಲಿದ್ದ ಬಂಡವಾಳವನ್ನೂ ಪುಷ್ಕರ್ ಅವರಿಗೆ ವಾಪಸ್ ನೀಡಿದ್ದೇನೆ ಎಂದಿರೋ ರಕ್ಷಿತ್ ಶೆಟ್ಟಿ, ಪುಷ್ಕರ್ ಅವರ ಬಿಸಿನೆಸ್ ಸ್ಟೈಲ್ ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.
ಹಾಗಂತ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಧ್ಯೆ ಇರೋ ಸ್ನೇಹವೂ ಮುಗಿದು ಹೋಯ್ತಾ ಎಂದರೆ ಹಾಗೇನಿಲ್ಲ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ವಿರುದ್ಧ ಸುದ್ದಿಗಳ ಗಾಸಿಪ್ ಆದಾಗ ಜೊತೆಗಿದ್ದವರು ಇದೇ ಪುಷ್ಕರ್. ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬಕ್ಕೂ ಶುಭ ಕೋರಿದ್ದ ಪುಷ್ಕರ್, ರಕ್ಷಿತ್ ಶೆಟ್ಟಿ ಬಗ್ಗೆ ನೆಗೆಟಿವ್ ಸುದ್ದಿ ಬಂದಾಗಲೆಲ್ಲ ಪಾಸಿಟಿವ್ ಆಗಿಯೇ ಜೊತೆಗಿದ್ದಾರೆ.