ದ್ವಿತ್ವ ಚಿತ್ರದ ಟೈಟಲ್ ಮತ್ತು ಪೋಸ್ಟರ್ ರಿಲೀಸ್ ಆಗಿದ್ದೇ ತಡ. ಅಭಿಮಾನಿಗಳು ಹೊಸತನದ ಲುಕ್‍ಗೆ ಥ್ರಿಲ್ಲಾದರು. ಹೆಸರಿನ ಅರ್ಥ ಏನಿರಬಹುದು ಎಂದು ತಲೆಗೆ ಹುಳ ಬಿಟ್ಟುಕೊಂಡರು. ಒಡೆದು ಹೋದಂತೆ ಕಾಣುವ ಪುನೀತ್ ಮುಖದಲ್ಲಿ ಬೇರೆಯ ಫೀಲ್ ಇತ್ತು. ಆದರೆ, ಇದರ ನಡುವೆಯೇ ಆ ಪೋಸ್ಟರ್ ಕಾಪಿ ಮಾಡಿದ್ದು ಎಂಬ ಆರೋಪವೂ ಕೇಳಿ ಬಂತು.
ಪಾಡ್ ಕ್ಲಾಸ್ಟ್ ಅನ್ನೋ ಆಡಿಯೋ, ವಿಡಿಯೋ ಪ್ಲಾಟ್ ಫಾರ್ಮ್ ವೆಬ್‍ಸೈಟ್‍ವೊಂದು ದ್ವಿತ್ವ ಮಾದರಿಯ ಫೋಟೋ ಹಾಕಿತ್ತು. ಅದೇ ಮಾಡೆಲ್‍ನಲ್ಲಿ ದ್ವಿತ್ವ ಪೋಸ್ಟರ್ ಬಂದಾಗ ಇದು ಕಾಪಿ ಮಾಡಿದ್ದು ಎಂಬ ಆರೋಪ ಬಂದಿದ್ದು ಸಹಜವಾಗಿಯೇ ಇತ್ತು. ಈಗ ಅದಕ್ಕೆ ಪೋಸ್ಟರ್ ಡಿಸೈನ್ ಮಾಡಿದ ಸಂಸ್ಥೆಯೇ ಉತ್ತರ ಕೊಟ್ಟಿದೆ.
ಪೋಸ್ಟರ್ ಡಿಸೈನ್ ಮಾಡಿದ್ದ ಆದರ್ಶ್ `ಈ ಪೋಸ್ಟರ್ ಕೃತಿಚೌರ್ಯದ್ದಲ್ಲ. ಷಟರ್‍ಸ್ಟಾಕ್ ಚಿತ್ರಗಳನ್ನು ಮಾರುವ ವೆಬ್‍ಸೈಟ್‍ನಿಂದ ಖರೀದಿಸಿದ್ದೇವೆ. ಹಾಗೆ ಖರೀದಿಸಿದ್ದ ಪೋಸ್ಟರ್‍ನ್ನೇ ದ್ವಿತ್ವ ಚಿತ್ರಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿದ್ದೇವೆ. ಇದು ಹೊಂಬಾಳೆ ಸಂಸ್ಥೆಗಾಗಲೀ, ಪವನ್ ಕುಮಾರ್ ಅವರಿಗಾಗಲೀ ಗೊತ್ತಿಲ್ಲ. ಲಾಕ್ ಡೌನ್ ಇದ್ದ ಕಾರಣ ಫೋಟೋಶೂಟ್ ಮಾಡಿಸೋಕೆ ಆಗಲಿಲ್ಲ. ಹೀಗಾಗಿ ಈ ರೀತಿ ಮಾಡಿದೆವು. ಇಷ್ಟಕ್ಕೂ ಆ ಪೋಸ್ಟರ್ ಡಿಸೈನ್‍ಗೆ ನಾವು ಹಣ ಕೊಟ್ಟು ಖರೀದಿಸಿದ ಮೇಲೆ ಅದು ನಮ್ಮದೇ ಪ್ರಾಪರ್ಟಿ' ಎಂದಿದ್ದಾರೆ ಆದರ್ಶ್.