ಪೊಗರು ಚಿತ್ರದ ನಂತರ ಧ್ರುವ ಸರ್ಜಾ ದುಬಾರಿ ಚಿತ್ರ ಮಾಡಬೇಕಿತ್ತು. ಆದರೆ ಚಿತ್ರಕ್ಕೆ ಬ್ರೇಕ್ ಹಾಕಲಾಗಿದೆ. ನಂದ ಕಿಶೋರ್ ಪ್ರಕಾರ ಚಿತ್ರದ ಶೇ.60ರಷ್ಟು ಶೂಟಿಂಗ್ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿದೆ. ಇನ್ನೊಂದು ಮೂಲದ ಪ್ರಕಾರ ಪೊಗರು ಚಿತ್ರ, ನಿರೀಕ್ಷಿಸಿದ ಲೆವೆಲ್ಲಿಗೆ ಹಿಟ್ ಆಗದಿರುವುದೇ ದುಬಾರಿಗೆ ಬ್ರೇಕ್ ಬೀಳಲು ಕಾರಣ ಎನ್ನಲಾಗುತ್ತಿದೆ. ಈ ನಡುವೆ ಧ್ರುವ ಸರ್ಜಾ ಅದ್ಧೂರಿ ಅರ್ಜುನ್ ಜೊತೆ ಸಿನಿಮಾ ಮಾಡುವ ಉತ್ಸುಕತೆ ತೋರಿಸಿದ್ದಾರಂತೆ.
ಧ್ರುವ ಸರ್ಜಾ ಅವರನ್ನು ಹೀರೋ ಆಗಿ ಲಾಂಚ್ ಮಾಡಿದ್ದು ಎ.ಪಿ.ಅರ್ಜುನ್. ಅದ್ಧೂರಿ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಧ್ರುವ ಸತತ ಹಿಟ್ ಕೊಟ್ಟಿದ್ದಾರೆ. ಈಗ ಮತ್ತೊಮ್ಮೆ ಧ್ರುವ, ಅರ್ಜುನ್ ಅವರ ಬಳಿಯೇ ಇನ್ನೊಂದು ಸಿನಿಮಾ ಮಾಡೋಕೆ ರೆಡಿಯಾಗಿದ್ದು, ಕಥೆ ಓಕೆ ಆಗಿದೆ ಎನ್ನಲಾಗುತ್ತಿದೆ. ಅಫ್‍ಕೋರ್ಸ್, ನಿರ್ಮಾಪಕರಾಗಿ ಉದಯ್ ಕೆ.ಮೆಹ್ತಾ ಅವರೇ ಇರಲಿದ್ದಾರೆ. ಇನ್ನು ದುಬಾರಿ ಚಿತ್ರಕ್ಕೆ ನಾಯಕಿಯಾಗಿದ್ದ ಶ್ರೀಲೀಲಾ ಕೂಡಾ ಅರ್ಜುನ್ ಪರಿಚಯಿಸಿದ ನಾಯಕಿಯೇ. ನಾಯಕ, ನಾಯಕಿಯ ಬದಲಾವಣೆ ಮಾಡದೇ ಕಥೆ ಮತ್ತು ನಿರ್ದೇಶಕರನ್ನು ಚೇಂಜ್ ಮಾಡಿ ಹೊಸ ಸಿನಿಮಾ ರೆಡಿ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಅಧಿಕೃತ ಸುದ್ದಿ ಹೊರಬೀಳಬೇಕಿದೆ.