` ಸಾವು ಅಧಿಕೃತಗೊಳ್ಳುವ ಮುನ್ನವೇ ಬ್ರೇಕಿಂಗ್ ನ್ಯೂಸ್ ಆಗಿದ್ದೇಕೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಾವು ಅಧಿಕೃತಗೊಳ್ಳುವ ಮುನ್ನವೇ ಬ್ರೇಕಿಂಗ್ ನ್ಯೂಸ್ ಆಗಿದ್ದೇಕೆ?
Sanchari Vijay

ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿತ್ತು. ಬೈಕ್ ಸ್ಕಿಡ್ ಆಗಿ ಬಿದ್ದ ವಿಜಯ್ ಅವರ ತಲೆಗೆ ಪೆಟ್ಟು ಬಿದ್ದು, ಮೆದುಳಿನಲ್ಲಿ ರಕ್ತಸ್ರಾವವೂ ಆಗಿತ್ತು. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ , ಸೋಮವಾರ ಮಧ್ಯಾಹ್ನದ ನಂತರ ಎಲ್ಲೆಡೆ ಸಂತಾಪದ ಸುದ್ದಿಗಳು ಹರಿದಾಡಿದ್ದವು. ಸುದ್ದಿ ಚಾನೆಲ್‍ಗಳಲ್ಲಿ ವಿಜಯ್ ಮೃತಪಟ್ಟಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು. ಆದರೆ, ವೈದ್ಯರು, ಕುಟುಂಬದವರು ಖುದ್ದು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರಿನ್ನೂ ಸತ್ತಿಲ್ಲ, ಉಸಿರಾಡುತ್ತಿದ್ದಾರೆ ಎಂದಿದ್ದರು. ಹಾಗಾದರೆ ಅದು ಬ್ರೇಕಿಂಗ್ ನ್ಯೂಸ್ ಆಗಿದ್ದು ಹೇಗೆ?

ಸುದ್ದಿ ಚಾನೆಲ್‍ಗಳು ಸಾವಿನ ಸುದ್ದಿಯನ್ನು ಬ್ರೇಕ್ ಮಾಡಲು ಮುಂದಾಗಿದ್ದಕ್ಕೆ ಕಾರಣಗಳೂ ಇವೆ. ಮೊದಲಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ, ವಿಜಯ್ ಸಾವನ್ನು ಅಧಿಕೃತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡರು. ಕಿಚ್ಚ ಸುದೀಪ್ ಕೂಡಾ ಸಾವಿನ ಸುದ್ದಿಯನ್ನು ಟ್ವೀಟ್ ಮಾಡಿದರು. ವಿಜಯ್ ಅವರಿಗೆ ತಕ್ಷಣ ಆಪರೇಷನ್ ಮತ್ತು ಚಿಕಿತ್ಸೆಗೆ ನೆರವಾಗಿದ್ದ ಸುದೀಪ್ ಅವರ ಟ್ವೀಟ್‍ನ್ನು ಬಹುತೇಕರು ನಂಬಿದರು. ಆಸ್ಪತ್ರೆಯ ಒಳಗೆ ವಿಜಯ್ ಅವರ ಕುಟುಂಬ ಸದಸ್ಯರು ಕಣ್ಣೀರಿಡುತ್ತಿರುವ ದೃಶ್ಯಗಳೂ ಕ್ಯಾಮೆರಾಗೆ ಸಿಕ್ಕವು. ಇದೆಲ್ಲದರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸಂತಾಪ ಸೂಚಿಸಿದರು. ಖುದ್ದು ಮುಖ್ಯಮಂತ್ರಿಯೇ ಸಂತಾಪ ಎಂದಾಗ ಸಹಜವಾಗಿಯೇ ಸುದ್ದಿ ಚಾನೆಲ್ಲುಗಳಲ್ಲೂ ವಿಜಯ್ ಇನ್ನಿಲ್ಲ ಎಂಬ ಸುದ್ದಿ ಪ್ರಸಾರವಾಯಿತು.

ನಂತರ ಚಿತ್ರರಂಗದ ಗಣ್ಯರಾದ ಶಿವಣ್ಣ, ಪುನೀತ್.. ಸೇರಿದಂತೆ ಬಹುತೇಕ ಹಿರಿ ಕಿರಿಯ ಕಲಾವಿದರು, ತಂತ್ರಜ್ಞರು ವಿಜಯ್ ಅವರ ಸಾವನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜುಗಳ ಮೂಲಕ ದೃಢೀಕರಿಸಿದರು. ಆದರೆ.. ಆಗಿನ್ನೂ ವಿಜಯ್ ಮೃತಪಟ್ಟಿರಲಿಲ್ಲ. ಅದಕ್ಕೆಲ್ಲ ಕಾರಣವಾಗಿದ್ದು ವೈದ್ಯರ ಹೇಳಿಕೆ.

ವಿಜಯ್ ಅವರ ಮೆದುಳು ನಿಷ್ಕ್ರಿಯವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇನ್ನೂ 5 ಗಂಟೆ ಪರಿಶೀಲಿಸಿ ನಂತರ ತಿಳಿಸಲಾಗುವುದು ಎಂದ ಅಪೋಲೋ ಆಸ್ಪತ್ರೆ ವೈದ್ಯರ ಮಾತಿನಲ್ಲಿ ವಿಜಯ್ ಬದುಕುಳಿಯುತ್ತಾರೆ ಎಂಬ ಸಣ್ಣ ಭರವಸೆಯೂ ಸಿಕ್ಕಿರಲಿಲ್ಲ. ಜೊತೆಗೆ, ಬ್ರೈನ್ ಡೆಡ್ ಆಗಿದೆ ಎನ್ನುವುದನ್ನು ವೈದ್ಯರೇ ಹೇಳಿದ್ದರು. ಬ್ರೈನ್ ಡೆಡ್ ಆದ ಮೇಲೆ, ಮೆದುಳಿನಿಂದ ದೇಹದ ಇತರೆ ಅಂಗಗಳಿಗೆ ಸಂದೇಶವೇ ಹೋಗುವುದಿಲ್ಲ ಎಂದ ಮೇಲೆ ಹೃದಯ, ಶ್ವಾಸಕೋಶ ಸೇರಿದಂತೆ ದೇಹದ ಯಾವ ಅಂಗವೂ ಕೆಲಸ ಮಾಡಲು ಸಾಧ್ಯವಿಲ್ಲ ಅನ್ನೋದು ಕಾಮನ್ ಮೆಡಿಕಲ್ ಸೈನ್ಸ್. ವೈದ್ಯರೇ ಕೈಚೆಲ್ಲಿದ್ದಾರೆ ಎನ್ನುವುದೂ ಗೊತ್ತಾದ ನಂತರ, ಸ್ವತಃ ಮುಖ್ಯಮಂತ್ರಿಗಳೇ ಸಂತಾಪ ಸೂಚಿಸಿದ ಮೇಲೆ ಸುದ್ದಿ ಚಾನೆಲ್‍ಗಳೂ ವಿಜಯ್ ಇನ್ನಿಲ್ಲ ಎಂದು ವರದಿ ಪ್ರಸಾರ ಮಾಡಿದವು.

ಆದರೂ.. ವೈದ್ಯರು ಅಧಿಕೃತವಾಗಿ ಘೋಷಿಸುವವರೆಗಾದರೂ ಸಾವಿನ ಸುದ್ದಿಯನ್ನು ತಡೆಹಿಡಿಯಬಹುದಿತ್ತು ಎಂಬ ಅಭಿಮಾನಿಗಳ ಮಾತಿನಲ್ಲೂ ಹುರುಳಿಲ್ಲದೇ ಇರಲಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery