ಅದೊಂದು ದುರಂತ ನಡೆಯಬಾರದಿತ್ತು. ನವೆಂಬರ್ 8, 2016ರಲ್ಲಿ ಮಾಸ್ತಿಗುಡಿ ಶೂಟಿಂಗ್‍ನಲ್ಲಿ ನಡೆದ ದುರಂತದಲ್ಲಿ ಅನಿಲ್ ಮತ್ತು ಉದಯ್ ಎಂಬ ಇಬ್ಬರು ಉದಯೋನ್ಮುಖ ಪ್ರತಿಭೆಗಳನ್ನು ಕಳೆದುಕೊಂಡಿತ್ತು ಚಿತ್ರರಂಗ. ಆ ಇಡೀ ದುರಂತಕ್ಕೆ ಸಾಹಸ ನಿರ್ದೇಶಕ ರವಿವರ್ಮ ಅವರೇ ಕಾರಣ ಎಂದು ದೂರಿದ್ದವರು ಒಬ್ಬಿಬ್ಬರಲ್ಲ. ಜೈಲಿಗೂ ಹೋಗಿ ಬಂದ ರವಿವರ್ಮ ನಂತರದ ಕಥೆಗಳನ್ನು ಈಗ ಹೇಳಿಕೊಂಡಿದ್ದಾರೆ.
ಅದು ನನ್ನನ್ನೂ ಕಾಡಿತು. ಜೈಲಿಂದ ಹೊರಬಂದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆಯನ್ನೂ ಮಾಡಿಬಿಟ್ಟಿದ್ದೆ. ಸಿಕ್ಸ್‍ಪ್ಯಾಕ್ ತೋರಿಸೋ ಸಲುವಾಗಿ ಅನಿಲ್, ಉದಯ್ ಹೇಳಿದರೂ ಲೈಫ್ ಜಾಕೆಟ್ ಹಾಕಿಕೊಳ್ಳಲಿಲ್ಲ. ಆದರೆ ದುರಂತ ನಡೆದುಹೋದ ಮೇಲೆ ನಾನೇ ಹೊಣೆಯಲ್ಲವೇ. ಆಗ ಚಿತ್ರರಂಗದ ಕೆಲವರು ನನಗೆ ಇನ್ನು ಮುಂದೆ ಕೆಲಸವನ್ನೇ ಕೊಡಬಾರದು ಎಂದು ನಿರ್ಧರಿಸಿದ್ದರು. ಆದರೆ ಅಂಬರೀಷಣ್ಣ ಸೇರಿದಂತೆ ಕೆಲವರು ನನಗೆ ಧೈರ್ಯ ತುಂಬಿದರು ಎಂದಿದ್ದಾರೆ ರವಿವರ್ಮ.
ಅಷ್ಟೇ ಅಲ್ಲ, ರವಿವರ್ಮ ತಮ್ಮ ಪ್ರೀತಿಯ ಮಗಳಿಗಾಗಿ ಒಂದು ಸೈಟ್ ಮಾಡಿದ್ದರಂತೆ. ಮೃತಪಟ್ಟ ಅನಿಲ್ ಅವರಿಗೆ ಒಬ್ಬ ಮಗಳಿದ್ದಾಳೆ. ನನ್ನ ಮಗಳ ಹೆಸರಲ್ಲಿದ್ದ ಸೈಟ್‍ನ್ನು ಅನಿಲ್ ಮಗಳಿಗೆ ಟ್ರಾನ್ಸ್‍ಫರ್ ಮಾಡಿದೆ. ಜೊತೆಗೆ 5 ಲಕ್ಷ ಡೆಪಾಸಿಟ್ ಇಟ್ಟೆ. ಉದಯ್ ಅವರ ಪೋಷಕರ ಹೆಸರಲ್ಲೂ 5 ಲಕ್ಷ ಡೆಪಾಸಿಟ್ ಇಟ್ಟೆ. ನನ್ನಿಂದೇನಾದ್ರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಎಂದು ಹೇಳಿಬಂದೆ ಎಂದಿದ್ದಾರೆ ರವಿವರ್ಮ.
ಹೆಚ್ಚೂ ಕಡಿಮೆ 5 ವರ್ಷಗಳ ಬಳಿಕ ತಾವು ಮಾಡಿದ್ದ ಕೆಲಸವನ್ನು ಈಗ ಹೇಳಿಕೊಂಡಿದ್ದಾರೆ ರವಿವರ್ಮ.