` ಸೆನ್ಸಾರ್ ಮಂಡಳಿ ವೇಸ್ಟ್ ಮಂಡಳಿ : ಹೇಳಿದ್ದು ಚಲನಚಿತ್ರ ಅಕಾಡೆಮಿ ಅಧ್ಯಕ್ಷರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸೆನ್ಸಾರ್ ಮಂಡಳಿ ವೇಸ್ಟ್ ಮಂಡಳಿ : ಹೇಳಿದ್ದು ಚಲನಚಿತ್ರ ಅಕಾಡೆಮಿ ಅಧ್ಯಕ್ಷರು..!
Sunil Puranik

ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ನೇಮಕವಾದ 71 ಜನ ಸದಸ್ಯರ ಅರ್ಹತೆ ವಿವಾದವಾಗಿದೆ. ಸಿನಿಮಾ ರಂಗದ ಪರಿಚಯವೇ ಇಲ್ಲದವರು ಈ ಮಂಡಳಿಯಲ್ಲಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಕುಟುಂಬದವರು, ಬಂಧುಗಳೇ ತುಂಬಿದ್ದಾರೆ ಎಂಬ ಆರೋಪಕ್ಕೆ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಕೊಟ್ಟಿರುವ ಸ್ಪಷ್ಟನೆ ಶಾಕ್ ಕೊಡುವಂತಿದೆ.

ಪತ್ರಕರ್ತರೊಬ್ಬರಿಗೆ ಈ ವಿಷಯದಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟೀಕರಣ ಕೊಡುವ ವೇಳೆ ಸುನಿಲ್ ಪುರಾಣಿಕ್ ಕೊಟ್ಟಿರುವ ಉತ್ತರ ಗಾಬರಿ ಹುಟ್ಟಿಸುತ್ತಿದೆ. ವಿವಾದವಾದಾಗ ಅತಿ ದೊಡ್ಡದಾಗಿ ಪ್ರಸ್ತಾಪವಾಗಿದ್ದ ಹೆಸರು ಸಾಗರ್ ಎಂಬುವವರದ್ದು. ಅವರು ಟಿವಿ, ಶಾರ್ಟ್ ಫಿಲಂ ಮಾಡಿದ್ದಾರೆಯೇ ಹೊರತು, ಯಾವುದೇ ಸಿನಿಮಾ ನಿರ್ಮಿಸಿರುವ ಅಥವಾ ನಿರ್ದೇಶಿಸಿರುವ ಅನುಭವ ಇಲ್ಲ. ಅವರು ಸುನಿಲ್ ಪುರಾಣಿಕ್ ಪುತ್ರ. ಈ ಬಗ್ಗೆ ವರದಿ ಮಾಡಿದ್ದ Just News ಪತ್ರಕರ್ತ ಡಾ. ಸುನಿಲ್ ಕುಮಾರ್ ಎಂಬುವವರಿಗೆ ಕರೆ ಮಾಡಿರುವ ಸುನಿಲ್ ಪುರಾಣಿಕ್ ಅವರ ಆಡಿಯೋ ರೆಕಾರ್ಡ್ನ್ನು ಅವರು ಬಹಿರಂಗಪಡಿಸಿದ್ದಾರೆ. ಆ ಆಡಿಯೋದಲ್ಲಿರುವ ಸಾರಾಂಶವೇನು ಗೊತ್ತೇ?

ಸೆನ್ಸಾರ್ ಮಂಡಳಿ ಅನ್ನೋದು ಒಂದು ವೇಸ್ಟ್ ಮಂಡಳಿ. ಅಲ್ಲಿ ದಿನಕ್ಕೆ 4 ಸಿನಿಮಾ ನೋಡಬೇಕು. ಒಂದೂವರೆ ಸಾವಿರ ರೂಪಾಯಿ ಕೊಡ್ತಾರೆ. ವೇಸ್ಟ್ ಮಂಡಳಿ ಅದು. ಥ್ಯಾಂಕ್ಲೆಸ್ ಜಾಬ್. ಅಂತಹ ವೇಸ್ಟ್ ಮಂಡಳಿ ಸದಸ್ಯನಾಗಿದ್ದಾನೆ ನನ್ನ ಮಗ. ಇಂತಾ ವೇಸ್ಟ್ ಮಂಡಳಿಗೆ ಮೆಂಬರ್ ಆಗೋ ಅಗತ್ಯ ಇತ್ತಾ ಎಂದು ನಾನೇ ನನ್ನ ಮಗನನ್ನು ಬೈದಿದ್ದೇನೆ ಎಂದಿದ್ದಾರೆ ಸುನಿಲ್ ಪುರಾಣಿಕ್.

ಅರೆ.. ಒಂದು ಚಿತ್ರದ ಹಣೆಬರಹ ನಿರ್ಧರಿಸುವ ಸೆನ್ಸಾರ್ ಮಂಡಳಿಯ ಸದಸ್ಯನಾಗೋದು ವೇಸ್ಟ್ ಕೆಲಸವಾ? ಹೊಟ್ಟೆ ಬಟ್ಟೆಗೆ ಗತಿಯಿಲ್ಲದವರು ಮಾಡೋ ಕೆಲಸವಾ? ಸುನಿಲ್ ಪುರಾಣಿಕ್ ಅವರ ಉತ್ತರ ನೋಡಿದರೆ ಹಾಗೆ ಅನ್ನಿಸೋದು ಸಹಜ. ಈ ಆಡಿಯೋ ಕೇಳಿದ, ಈ ಹಿಂದೆ ಸೆನ್ಸಾರ್ ಮಂಡಳಿಯಲ್ಲಿ ಕೆಲಸ ಮಾಡಿದ್ದ ಹಿರಿಯರಿಗೂ ಇದು ಶಾಕ್ ಕೊಟ್ಟಿದ್ದರೆ ಆಶ್ಚರ್ಯವಿಲ್ಲ. ಹೇಳಿರುವುದು ಅಕಾಡೆಮಿ ಅಧ್ಯಕ್ಷರಾದ್ದರಿಂದ ತಾವು ನಿಜಕ್ಕೂ ವೇಸ್ಟ್ ಇರಬಹುದೇನೋ ಎಂಬ ಸಂಶಯ ಸೆನ್ಸಾರ್ ಮಂಡಳಿ ಮಾಜಿ ಸದಸ್ಯರಿಗೆ ಬಂದಿದ್ದರೆ ಅದು ಸಹಜವೇ ಬಿಡಿ.

ಆದರೆ, ಸೆನ್ಸಾರ್ ಮಂಡಳಿಯನ್ನೇ ವೇಸ್ಟ್, ಅಲ್ಲಿರುವವರೆಲ್ಲ ವೇಸ್ಟ್ ಎನ್ನುವ ಅಭಿಪ್ರಾಯ ಹೊಂದಿರುವ ವ್ಯಕ್ತಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಎನ್ನುವುದನ್ನು ಕನ್ನಡ ಚಿತ್ರರಂಗ ಹೆಮ್ಮೆಯೆಂದು ಭಾವಿಸುತ್ತದೆಯೇ? ಅಷ್ಟೇ ಅಲ್ಲ, ಆ ಆಡಿಯೋದಲ್ಲಿ ನಾನು ಅಕಾಡೆಮಿ ಅಧ್ಯಕ್ಷನಾಗಿದ್ದಾಗ ನನ್ನ ಮಗನ ಶಾರ್ಟ್ ಫಿಲಂ ಒಂದನ್ನು ಸ್ಪರ್ಧೆಗೆ ಬರದಂತೆ ತಡೆದಿದ್ದೆ. ಆಗ ಮಣಿವಣ್ಣನ್ ನನ್ನನ್ನು ಅಭಿನಂದಿಸಿದ್ದರು. ನನ್ನ ಮಗನ ಇನ್ನೊಂದು ಚಲನಚಿತ್ರ ಡೊಳ್ಳು ಚಲನಚಿತ್ರೋತ್ಸವಕ್ಕೆ ಬೇಡ ಎಂದಿದ್ದೆ. ನಾನು ಆ ಮಂಡಳಿಯಲ್ಲಿದ್ದೆ ಎನ್ನುವ ಕಾರಣಕ್ಕೆ ನನ್ನ ಮಗನಿಗೇ ಅನ್ಯಾಯ ಮಾಡಿದ್ದೆ ಎಂದೂ ಆ ಆಡಿಯೋದಲ್ಲಿದೆ. ಆದರೆ, ಅವು ಪ್ರಶಸ್ತಿ ಪುರಸ್ಕೃತ ಶಾರ್ಟ್ ಫಿಲಂಗಳು. ಅವೇ ನನ್ನ ಸಾಧನೆ ಎನ್ನುತ್ತಿದ್ದಾರೆ ಸುನಿಲ್ ಪುರಾಣಿಕ್ ಪುತ್ರ ಸಾಗರ್. ಅರೆ.. ಸುನಿಲ್ ಪುರಾಣಿಕ್ ನೋ ಎಂದಿದ್ದ ಆ ಚಿತ್ರಗಳು, ಸ್ಪರ್ಧೆಗೇ ಬರದಿದ್ದ ಆ ಚಿತ್ರಗಳಿಗೆ ಅವಾರ್ಡ್ ಬಂದಿದ್ದು ಹೇಗೆ?

ಏನೋ.. ಸೆನ್ಸಾರ್ ಮಂಡಳಿಯ ನೂತನ ಸದಸ್ಯರ ಅರ್ಹತೆ, ಮಾನದಂಡ ಹೇಗೆ ಅರ್ಥವಾಗುತ್ತಿಲ್ಲವೋ.. ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಮಾತುಗಳೂ ಹಾಗೇ.. ಅರ್ಥವಾಗುತ್ತಿಲ್ಲ.  ಒಂದಂತೂ ಸತ್ಯ. ಸುನಿಲ್ ಪುರಾಣಿಕ್ ಅವರು ವೇಸ್ಟ್ ಅಲ್ಲ. ಏಕೆಂದರೆ ಅವರು ಈ ಹಿಂದೆ ಚಲನಚಿತ್ರ ಸೆನ್ಸಾರ್ ಮಂಡಳಿಯ ಸದಸ್ಯರಂತೂ ಆಗಿದ್ದವರಲ್ಲ ಎಂದರೆ ಕುಚೋದ್ಯ ಎಂದುಕೊಳ್ಳಬೇಡಿ.