ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಹೃದಯವಂತಿಕೆ ಮೆರೆದಿದ್ದಾರೆ. ಒಬ್ಬರಲ್ಲ.. ಇಬ್ಬರಲ್ಲ.. ಬರೋಬ್ಬರಿ 3,600ಕ್ಕೂ ಹೆಚ್ಚು ಚಲನಚಿತ್ರ ಕಾರ್ಮಿಕ ಕುಟುಂಬಗಳಿಗೆ ತಲಾ 5 ಸಾವಿರ ರೂ. ನೀಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಒಬ್ಬೊಬ್ಬರಿಗೆ ತಲಾ 5 ಸಾವಿರ ಎಂದರೆ, ನೋಂದಾಯಿತ 3600 ಕುಟುಂಬಗಳಿಗೆ 1 ಕೋಟಿ 80 ಲಕ್ಷಕ್ಕೂ ಹೆಚ್ಚು ನೆರವು. ನೇರವಾಗಿ ಕಾರ್ಮಿಕರ ಖಾತೆಗೇ ಹಣ ಹಾಕುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ ಯಶ್.
ಇದು ಬರೀ ಮಾತನಾಡುವ ಸಮಯ ಅಲ್ಲ. ಸಂಕಷ್ಟದಲ್ಲಿರುವ ನಮ್ಮವರ ಕುಟುಂಬದ ಜೊತೆ ನಿಲ್ಲಬೇಕಾದ ಸಮಯ. ನನ್ನದು ಸಣ್ಣ ಸಹಾಯ. ಸಂಕಷ್ಟದಲ್ಲಿರುವವರ ಎಲ್ಲ ಕಷ್ಟಗಳಿಗೂ ಇದು ಪರಿಹಾರ ಎನ್ನುವುದು ನನ್ನ ಭಾವನೆ ಅಲ್ಲ. 3 ಸಾವಿರಕ್ಕೂ ಹೆಚ್ಚಿರುವ ನಮ್ಮ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಖಾತೆಗಳಿಗೆ ನೇರವಾಗಿ ಅವರ ಅಧಿಕೃತ ಖಾತೆಗಳಿಗೆ ನನ್ನ ಸಂಪಾದನೆಯ ಹಣ ನೀಡಲಿದ್ದೇನೆ. ಈಗಿನಿಂದಲೇ ಅದು ಜಾರಿಗೆ ಬರಲಿದೆ ಎಂದು ವಿನಮ್ರತೆ ಮೆರೆದಿದ್ದಾರೆ ಯಶ್.
ತಮ್ಮ ನೆರವಿನ ಹಸ್ತ ಚಾಚುವುದಕ್ಕೂ ಮುನ್ನ ಚಲನಚಿತ್ರರಂಗದ ಹಿರಿಯರಾದ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರವೀಂದ್ರನಾಥ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ವಿವರ ಪಡೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನೂ ಕೊಟ್ಟಿದ್ದಾರೆ ಯಶ್.
ಯಶ್ ಅವರ ಈ ಸಹಾಯಕ್ಕೆ ಕಾರ್ಮಿಕರು, ತಂತ್ರಜ್ಞರ ಪರವಾಗಿ ಧನ್ಯವಾದ ತಿಳಿಸಿದ್ದಾರೆ ಸಾ.ರಾ.ಗೋವಿಂದು.
ಇಷ್ಟೇ ಅಲ್ಲ, ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರ ಕುಟುಂಬಗಳಿಗೆ ನೆರವಾಗಿ ನಿಲ್ಲಬೇಕು. ಹಾಗೆ ಮಾಡಿದರೆ ನಾನು ಮಾಡಿದ ಈ ಪ್ರಯತ್ನಕ್ಕೆ ಸಾರ್ಥಕತೆ ಬರಲಿದೆ ಎಂದಿದ್ದಾರೆ ಯಶ್.
ಇನ್ನು ಈ ಬಗ್ಗೆ ಯಾವುದೇ ಸುದ್ದಿವಾಹಿನಿಗಳ ಜೊತೆ ಮಾತನಾಡಿಲ್ಲ. ಮಾಡಿದ ಸಹಾಯದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದೇ ಹೋದರೆ ಅದು ಕೆಲವರಿಗೆ ದಕ್ಕದೇ ಹೋಗಬಹುದು. ಮಾಹಿತಿ ನೀಡಿದ್ದೇನೆ. ಇಷ್ಟರಮೇಲೆ ನಾವು ಮಾಡಿದ ಸಹಾಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ ಯಶ್.