ಮೊನ್ನೆಯಷ್ಟೇ ಕರ್ನಾಟಕ ಫಿಲಂ ಚೇಂಬರ್, ಚಿತ್ರರಂಗದ ಎಲ್ಲರಿಗೂ ವ್ಯಾಕ್ಸಿನ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಈಗ ಸಿಎಂ ಯಡಿಯೂರಪ್ಪ ಪರಿಹಾರ ಪ್ಯಾಕೇಜ್ ಘೋಷಿಸಿರುವ ಹಿನ್ನೆಲೆಯಲ್ಲಿ ಇನ್ನೂ ಹಲವರು ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ಯಾಕೇಜ್‍ನಲ್ಲಿ ಇರುವ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ, ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರ ಕಲಾವಿದರಿಗೆ 3 ಸಾವಿರ ಪರಿಹಾರ ಧನ ಎಂದು ಘೋಷಿಸಿದೆ. ಸರ್ಕಾರ ಹೇಳಿರುವ ಆ ಕಲಾವಿದರು ಯಾರು? ಜನಪದ ಕಲಾವಿದರೇ, ಡೊಳ್ಳು ಕುಣಿತದ ಕಲಾವಿದರೇ, ರಂಗಭೂಮಿ ಕಲಾವಿದರೇ, ಸಂಸ್ಕøತಿ ಇಲಾಖೆಯಲ್ಲಿ ಗುರುತಿಸಿಕೊಂಡಿರುವ ಕಲಾವಿದರೇ, ಪೋಷಕ ನಟ ನಟಿಯರೇ, ನಾಯಕ ನಟ ನಟಿಯರೇ.. ಯಾವುದೂ ಅರ್ಥವಾಗುತ್ತಿಲ್ಲ. ದಯವಿಟ್ಟು ಯಡಿಯೂರಪ್ಪನವರು ಈ ಬಗ್ಗೆ ಗಮನ ಹರಿಸಬೇಕು. ಚಿತ್ರರಂಗದ ಸಾವಿರಾರು ಕಾರ್ಮಿಕರು ಹಾಗೂ ಅಶಕ್ತ ಕಲಾವಿದರಿಗೆ ಪ್ಯಾಕೇಜ್ ಘೋಷಿಸಬೇಕು ಎಂದು ಕೇಳಿಕೊಂಡಿದ್ದಾರೆ ಸಾ.ರಾ.ಗೋವಿಂದು.
ಇದರ ನಡುವೆ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದ್ದಾರೆ. ನಿರ್ದೇಶಕರ ಸಂಘವೂ ಮನವಿ ಸಲ್ಲಿಸಿದೆ. ನಿರ್ಮಾಪಕ ಭಾ.ಮಾ.ಹರೀಶ್, ಕಾರ್ತಿಕ್ ಜಯರಾಮ್, ಆಸ್ಕರ್ ಕೃಷ್ಣ ಅವರ ನಿಯೋಗ ಅಶಕ್ತ ಕಲಾವಿದರಿಗೆ ನೆರವು ಒದಗಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಸಿನಿ ಕಲಾವಿದರಿಗೆ ರೇಷನ್ ಕೂಪನ್ ನೀಡುವಂತೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.