ಕೋವಿಡ್ ಕಷ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹೀರೋ ಆದವರು ಸೋನು ಸೂದ್. ಸಿನಿಮಾಗಳಲ್ಲಿ ವಿಲನ್ ಆದರೂ, ರಿಯಲ್ ಲೈಫ್‍ನಲ್ಲಿ ಹೀರೋ ಆಗಿರುವ ಸೋನು ಸೂದ್ ತಮ್ಮ ಫೌಂಡೇಷನ್ ಮೂಲಕ ಸಾವಿರಾರು ಜನರಿಗೆ ನೆರವು ನೀಡಿದ್ದಾರೆ. ನೀಡುತ್ತಲೂ ಇದ್ದಾರೆ.
ಕೋವಿಡ್ ಮೊದಲ ಅಲೆಯಲ್ಲಿ ಬಡವರು, ಕೂಲಿ ಕಾರ್ಮಿಕರ ಸಾಗಾಟಕ್ಕೆ, ಹಸಿವಿಗೆ ಆಸರೆಯಾಗಿದ್ದ ಸೋನು ಸೂದ್, ಈ ಬಾರಿ ಆಕ್ಸಿಜನ್ ನೆರವು ನೀಡುತ್ತಿದ್ದಾರೆ. ಇದರ ಮಧ್ಯೆ ಸೋನು ಸೂದ್ ಹೆಸರಿನಲ್ಲಿ ವಂಚಕರ ಜಾಲವೊಂದು ತಲೆಯೆತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಫೋನ್ ಪೇ ನಂ.6287047336 ಹಾಕಿ, ಸೋನು ಸೂದ್ ಟ್ರಸ್ಟ್‍ಗೆ ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ. ಸೋನು ಸೂದ್ ಅವರ ಸೇವೆಯ ಬಗ್ಗೆ ಹೆಮ್ಮೆಯಿರುವ ಸಾವಿರಾರು ಜನ ತಮ್ಮ ತಮ್ಮ ಕೈಲಾದಷ್ಟು ಹಣವನ್ನು ಈ ಅಕೌಂಟ್‍ಗೆ ಟ್ರಾನ್ಸ್‍ಫರ್ ಕೂಡಾ ಮಾಡಿದ್ದಾರೆ.
ಈ ಕುರಿತು ಸ್ವತಃ ಸೋನು ಸೂದ್ ಟ್ವೀಟ್ ಮಾಡಿದ್ದು, ಯಾರೂ ಹಣ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಯಾರಾದರೂ ಈ ಕುರಿತು ಕರೆ ಮಾಡಿದರೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಸಾರ್ವಜನಿಕರಿಗೆ ಮನವಿಯನ್ನೂ ಮಾಡಿದ್ದಾರೆ.