ಚಿತ್ರರಂಗ ಮೊದಲೇ ಕೊರೊನಾದಿಂದ ನಲುಗಿ ಹೋಗಿದೆ. ದಿನ ದಿನವೂ ಚಿತ್ರರಂಗದ ಕೆಲವರಾದರೂ ಸಾವಿನ ಮನೆ ಸೇರುತ್ತಿದ್ಧಾರೆ. ಈ ಮಧ್ಯೆ ಸುಳ್ಳು ಸುದ್ದಿಗಳ ಹಾವಳಿಯೂ ಎಲ್ಲೆ ಮೀರಿದೆ. ಈ ಬಾರಿ ಅದು ಹಿರಿಯ ನಟ ದೊಡ್ಡಣ್ಣ ಅವರನ್ನು ಬೇಟೆಯಾಡಿದೆ.
ಕೆಲವು ಜಾಲತಾಣಗಳಲ್ಲಿ, ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ದೊಡ್ಡಣ್ಣ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಂತಾಪಗಳೂ ವ್ಯಕ್ತವಾಗುತ್ತಿವೆ. ನೋಡೋಣ ಎಂದು ಚಿತ್ರಲೋಕ ಖುದ್ದು ದೊಡ್ಡಣ್ಣನವರಿಗೇ ಫೋನ್ ಮಾಡಿದಾಗ ಅವರು ಊಟ ಮಾಡುತ್ತಿದ್ದರು.
ನಾನು ಗಟ್ಟಿಮುಟ್ಟಾಗಿಯೇ ಇದ್ದೇನೆ. ಎರಡು ಬಾರಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಕೊರೊನಾ ನನ್ನ ಹತ್ತಿರವೂ ಸುಳಿದಿಲ್ಲ. ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ತಮ್ಮದೇ ಶೈಲಿಯಲ್ಲಿ ಗಹಗಹಿಸಿ ನಗುತ್ತಾ ಹೇಳಿದ ದೊಡ್ಡಣ್ಣ, ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ಎಲ್ಲರೂ ಗಾಬರಿಯಾಗುತ್ತಾರೆ ಎಂದು ಸುಳ್ಳು ಸುದ್ದಿ ವೀರರಿಗೆ ಮನವಿ ಮಾಡಿದ್ದಾರೆ.