ಕೋವಿಡ್ 19 ಬಿಕ್ಕಟ್ಟು ಶುರುವಾದಾಗ ಮೊದಲ ಹೊಡೆತ ಬಿದ್ದಿದ್ದೇ ಚಿತ್ರರಂಗಕ್ಕೆ. ಮೊದಲು ಬಾಗಿಲು ಹಾಕಿದ ಉದ್ಯಮವೇ ಸಿನಿಮಾ. ಈಗಲೂ ಅಷ್ಟೆ.. ಉಳಿದ ಉದ್ಯಮಗಳನ್ನೆಲ್ಲ ಕೊರೊನಾ ಆಸ್ಫೋಟಿಸುವವರೆಗೂ ಕಾದು ಬಾಗಿಲು ಹಾಕಿಸಿದ ಸರ್ಕಾರ, ಸಿನಿಮಾ ಉದ್ಯಮವನ್ನು ಮಾತ್ರ ಆರಂಭದಲ್ಲೇ ಕೈ ಕಟ್.. ಬಾಯ್ಮುಚ್.. ಗಪ್‍ಚುಪ್.. ಎಂದು ಕೂರಿಸಿಬಿಟ್ಟಿತು. 2020ರ ಆರಂಭದಲ್ಲಿ ಬಾಗಿಲು ಮುಚ್ಚಿದ್ದ ಚಿತ್ರರಂಗ ಉಸಿರಾಡಿದ್ದು 2021ರಲ್ಲಿ ಒಂದೇ ಒಂದು ತಿಂಗಳು. ಈಗ ಮತ್ತೆ ಬಾಗಿಲು.
ಇತಿಹಾಸದಲ್ಲಿ ಕಂಡು ಕೇಳರಿಯದ ಒಂದು ರೋಗ ಬಂದಾಗ ಮುನ್ನೆಚ್ಚರಿಕೆ ವಹಿಸುವುದು ತಪ್ಪೇನಲ್ಲ. ಆದರೆ.. ಅಂತಾದ್ದೊಂದು ಕಷ್ಟ ಬಂದಾಗ ಅದೇ ಉದ್ಯಮದವರು ಏನಾದರೂ ನೆರವು ಸಿಕ್ಕೀತೇನೋ ಎಂದು ಸರ್ಕಾರದ ಕಡೆ ನೋಡುವುದು ಸಾಮಾನ್ಯ. ಆದರೆ.. ಸರ್ಕಾರ ಚಿತ್ರರಂಗವನ್ನಂತೂ ಅದೊಂದು ಉದ್ಯಮವೂ ಅಲ್ಲ, ಸಮಸ್ಯೆಯೂ ಅಲ್ಲ... ಅಲ್ಲಿರುವವರು ಮನುಷ್ಯರೂ ಅಲ್ಲ ಎಂಬಂತೆ ವರ್ತಿಸುತ್ತಿರುವುದಂತೂ ಸತ್ಯ. ಚಿತ್ರರಂಗದವರು ಇದುವರೆಗೆ ಸರ್ಕಾರವನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆಯೇ ಹೊರತಾಗಿ, ಸರ್ಕಾರದಿಂದ ನಯಾಪೈಸೆ ನೆರವೂ ಸಿಕ್ಕಿಲ್ಲ. ನೆರವಿನ ಮಾತು ಬಿಡಿ, ಇರುವ ಟ್ಯಾಕ್ಸ್, ಶುಲ್ಕಗಳನ್ನೇ ಡಬಲ್ ಮಾಡಿ ಹೆಂಗೆ ನಾವು ಎನ್ನುತ್ತಿದೆ ಸರ್ಕಾರ.
ಸರ್ಕಾರಕ್ಕೆ ಚಿತ್ರರಂಗ ಎಂದರೆ ಏನು ಎಂಬ ಪರಿಕಲ್ಪನೆಯೂ ಇದ್ದಂತಿಲ್ಲ. ಚಿತ್ರರಂಗ ಎಂದರೆ ಕೇವಲ ನಟರಷ್ಟೇ ಅಲ್ಲ, ಚಿತ್ರರಂಗವನ್ನು ನಂಬಿಕೊಂಡು ಪ್ರೊಡಕ್ಷನ್ ಹೌಸ್ ಕಾರ್ಮಿಕರು, ಕಲಾವಿದರು, ತಂತ್ರಜ್ಞರು, ಚಿತ್ರಮಂದಿರದ ಮಾಲೀಕರು ಮತ್ತು ಕಾರ್ಮಿಕರು, ಡಿಸೈನರುಗಳು, ಜ್ಯೂ. ಆರ್ಟಿಸ್ಟುಗಳು.. ಹೀಗೆ ಒಂದು ದೊಡ್ಡ ಸಮೂಹವೇ ಇದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬದವರನ್ನು ಸಾಕುತ್ತಿರುವ ದೊಡ್ಡ ಉದ್ಯಮ ಚಿತ್ರರಂಗ.
ಹೊರಗಿನಿಂದ ರಂಗುರಂಗಾಗಿ ಕಾಣುತ್ತಿದೆಯೆಂದ ಮಾತ್ರಕ್ಕೆ.. ಚಿತ್ರರಂಗ ಅದ್ಭುತವಾಗಿದೆ ಎಂದರ್ಥವಲ್ಲ. ಸರ್ಕಾರ ಕನಿಷ್ಠ ಈ ಸಮಸ್ಯೆಗಳೇನು ಎನ್ನುವುದನ್ನಾದರೂ ಅರ್ಥ ಮಾಡಿಕೊಂಡರೆ.. ಏನು ಮಾಡಬಹುದು ಎಂಬ ಆಲೋಚನೆಯನ್ನಾದರೂ ಮಾಡಬಹುದು. ದುರಂತವೆಂದರೆ ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಮೆಷಿನ್ ಹಾಕಿಕೊಂಡರೂ ಕಿವಿ ಕೇಳಿಸೋದಿಲ್ಲ. ಕನ್ನಡಕ ಹಾಕಿಕೊಂಡರೂ ಕಣ್ಣು ಕಾಣಿಸುತ್ತಿಲ್ಲ. ಯೋಚಿಸಬೇಕಾದ ಜಾಗದಲ್ಲಿ ಯೋಚನೆ ಮಾಡುವುದನ್ನೇ ಬಿಟ್ಟಂತಿದೆ.