ಕೊರೊನಾ ಯಾರನ್ನೂ ಬಿಡುತ್ತಿಲ್ಲ. 2ನೇ ಅಲೆಯಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿರೋ ಕೊರೊನಾ ಹಲವರನ್ನು ಕಾಡುತ್ತಿದೆ. ಜನಸಾಮಾನ್ಯರನ್ನು ಕಾಡುತ್ತಿರೋ ಕೊರೊನಾ, ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಚಿತ್ರರಂಗವನ್ನೂ ಕಾಡೋಕೆ ಶುರು ಮಾಡಿದೆ. ಈ ಬಾರಿ ಕೊರೊನಾ ಶಾಕ್ಗೆ ತುತ್ತಾದವರ ಲಿಸ್ಟ್ ಕೂಡಾ ಬೆಳೆಯೋಕೆ ಶುರುವಾಗಿದೆ.
ಕೊರೊನಾ 2ನೇ ಅಲೆಯಲ್ಲಿ ಮೊದಲ ಬಾರಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ. ಅವರು ಈಗಾಗಲೇ ಗುಣಮುಖರಾಗುತ್ತಿದ್ದಾರೆ. ನಂತರ ಲವ್ ಮಾಕ್ಟೇಲ್ ಜೋಡಿ ಕೃಷ್ಣ ಮತ್ತು ಮಿಲನ ನಾಗರಾಜ್ ದಂಪತಿಗೆ ಪಾಸಿಟಿವ್ ಬಂತು. ಅವರೀಗ ಕ್ವಾರಂಟೈನ್ನಲ್ಲಿದ್ದಾರೆ.
ಈಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಅತ್ತ ಅವರ ತಂದೆ, ಮಾಜಿ ಸಿಎಂ, ಚಿತ್ರ ನಿರ್ಮಾಪಕ ಕುಮಾರಸ್ವಾಮಿ ಕೂಡಾ ಆಸ್ಪತ್ರೆ ಸೇರಿದ್ದಾರೆ. ತಾಯಿ ಅನಿತಾ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ನಿಖಿಲ್ ಅವರಿಗೆ ಅವರ ವಿವಾಹ ವಾರ್ಷಿಕೋತ್ಸವ ದಿನದಂದೇ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿರೋದು ವಿಶೇಷ.
ತಾರಾ ದಂಪತಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಅವರೂ ಕ್ವಾರಂಟೈನ್ನಲ್ಲಿದ್ದಾರೆ. ಆರ್ಜೆ, ನಿರ್ದೇಶಕ ರೋಹಿತ್ ಅವರಿಗೂ ಸೋಂಕು ತಗುಲಿದೆ. ಬಹುಭಾಷಾ ಕಲಾವಿದ ಸೋನು ಸೂದ್ ಅವರಿಗೆ ಕೂಡಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅವರೂ ಕ್ವಾರಂಟೈನ್ ಸೇರಿದ್ದಾರೆ.
ಇನ್ನು ತೆಲುಗು,ತಮಿಳು, ಹಿಂದಿ ಚಿತ್ರರಂಗ ಸ್ಟಾರ್ ನಟ, ನಟಿ, ತಂತ್ರಜ್ಞರೂ ಕೊರೊನಾಗೆ ತುತ್ತಾಗಿದ್ದಾರೆ. ಕೆಲವರು ಗುಣಮುಖರಾಗಿದ್ದರೆ, ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರಂತವೆಂದರೆ ನಟ ರಮೇಶ್ ಪಂಡಿತ್ ಅವರ ಪತ್ನಿ ಸುನೇತ್ರಾ ಅವರ ಅಕ್ಕ ಸರಿತಾ ಕೊರೊನಾಗೆ ಬಲಿಯಾಗಿದ್ದಾರೆ. ದಯವಿಟ್ಟು ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ. ಸರ್ಕಾರದ ಎಚ್ಚರಿಕೆಯನ್ನು ಗಂಭೀರವಾಗಿ ಪಾಲಿಸಿ ಎಂದು ರಮೇಶ್ ಪಂಡಿತ್ ದಂಪತಿ ಮನವಿ ಮಾಡಿದ್ದಾರೆ.