ಸಹಜವಾಗಿಯೇ ಎಲ್ಲ ನಿರ್ದೇಶಕರಿಗೂ ಇರುವಂತೆ ಪುನೀತ್ ರಾಜ್‌ಕುಮಾರ್ ಅವರಿಗೆ ಸಿನಿಮಾ ಮಾಡಬೇಕು ಅನ್ನೋ ಕನಸು ಲೂಸಿಯಾ ಪವನ್ ಅವರಿಗೂ ಇತ್ತು. ಭಟ್ಟರ ಜೊತೆ ಭೇಟಿ ಮಾಡಿದ್ದಾಗ ಪುನೀತ್ ಅವರ ಸರಳತೆ ಮತ್ತು ಕಥೆ ಕೇಳುವ ಗುಣಕ್ಕೆ ಮಾರು ಹೋಗಿದ್ದರಂತೆ ಪವನ್. ಹೀಗಾಗಿಯೇ ಒಮ್ಮೆ ಹೀಗೆ ಒಂದು ಕಥೆ ಬರೆದಿದ್ದೇನೆ ಎಂದಿದ್ದರಂತೆ. ತೆಗೆದುಕೊಂಡು ಬನ್ನಿ, ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದರಂತೆ ಪುನೀತ್.
ಪುನೀತ್ ರಾಜ್‌ಕುಮಾರ್ ಅವರಿಗೆ ಕಥೆ ಒಪ್ಪಿಸಲು ಕಷ್ಟ ಎನ್ನುತ್ತಾರೆ. ನನಗೋ ಕಥೆ ಹೇಳೋಕೆ ಬರಲ್ಲ. ಕಂಪ್ಲೀಟ್ ಸ್ಕ್ರಿಪ್ಟ್ ಬರೆದು ಕೊಡುತ್ತೇನೆ. ಅದನ್ನು ಓದಬೇಕು. ಕೆಲವರು ಓದುವುದಿಲ್ಲ ಎಂದೂ ಹೇಳಿದ್ದಾರೆ ಎಂದಿರುವ ಪವನ್, ನಂತರ ಕಥೆಯನ್ನು ಮೇಲ್ ಮಾಡಿದರಂತೆ.
ಎರಡು ದಿನದ ನಂತರ ರಿಯಾಕ್ಷನ್ ಬಂತು. ಬ್ರಿಲಿಯಂಟ್ ಸ್ಕ್ರಿಪ್ಟ್ ಮಾಡಿದ್ದೀರಾ, ಇದನ್ನು ನಾನು ಮಾಡುತ್ತೇನೆ ಎಂದರು. ಜತೆಗೆ ನೀವೇನು ಬರೆದುಕೊಂಡಿದ್ದೀರೋ ಅಷ್ಟನ್ನೂ ಡಿಟೇಲ್ ಆಗಿ ತೆರೆಮೇಲೆ ತರಬೇಕು ಎಂದು ಹೇಳಿದರು. ಕಥೆಯನ್ನು ನಂತರ ವಿಜಯ್ ಕಿರಗಂದೂರು ಕೇಳಿದರು. ನಿರ್ಮಾಣ ಮಾಡೋಕೆ ಮುಂದೆ ಬಂದರು ಎನ್ನುವ ಪವನ್, ಇದು ಯಾವ ಜಾನರ್ ಸಿನಿಮಾ ಎಂದರೆ, ಕಂಟೆಂಟ್ ಇರೋ ಸಿನಿಮಾ ಎನ್ನುತ್ತಾರೆ.
ಇನ್ನೂ ಚಿತ್ರಕ್ಕೆ ಟೈಟಲ್ ಇಟ್ಟಿಲ್ಲ. ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎನ್ನುವ ಪವನ್ ಅವರಿಗೆ ಜುಲೈನಲ್ಲಿ ಶೂಟಿಂಗ್ ಶುರು ಮಾಡೋ ಪ್ಲಾನ್ ಇದೆ.
ಪವನ್ ಅವರು ತುಂಬಾ ವಿಶಿಷ್ಟ ಸಬ್ಜೆಕ್ಟ್ಗಳನ್ನ ತೆರೆಮೇಲೆ ತರ್ತಾರೆ. ಅವರ ಜೊತೆ ಸುಮಾರು ಸಾರಿ ಚರ್ಚೆ ಮಾಡಿದ್ದೇನೆ. ಈ ಕಥೆ ಇಷ್ಟವಾಯ್ತು. ನಿರ್ಮಾಪಕರಿಗೂ ಇಷ್ಟವಾಗಿದೆ. ಜೇಮ್ಸ್ ಮುಗಿದ ತಕ್ಷಣ ಪವನ್ ಸಿನಿಮಾ ಶುರುವಾಗುತ್ತೆ ಎಂದಿದ್ದಾರೆ ಪುನೀತ್. ಯಾವ ಜಾನರ್ ಕಥೆ ಅನ್ನೋ ಪ್ರಶ್ನೆಗೆ ಪುನೀತ್ ಅವರದ್ದು ಒಂದೇ ಉತ್ತರ. ನಂಗೆ ಜಾನರ್ ಗೊತ್ತಿಲ್ಲ. ಸಿನಿಮಾ ಅನ್ನೋದಷ್ಟೇ ಗೊತ್ತು.