ಅವರಿಗೆ ಇದೊಂದು ಅಭ್ಯಾಸವಾಗಿ ಹೋಗಿದೆ. ರಿಲೀಸ್ ಆಗೋಕೆ ಮೊದಲು ಕೋರ್ಟ್ಗೆ ಹೋಗೋದು, ಸ್ಟೇ ತರೋ ಅಭ್ಯಾಸ ಅವರದ್ದು. ಇಂತಹದ್ದಕ್ಕೆಲ್ಲ ಹೆದರಲ್ಲ. ನಾವು ಕೋರ್ಟಿನಲ್ಲೇ ಅವರಿಗೆ ಉತ್ತರ ಕೊಡ್ತೇವೆ.
ಇದು ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಮಾತು. ಕಿರಿಕ್ ಪಾರ್ಟಿ ತಂಡದ ವಿರುದ್ಧದ ಲಹರಿ ಸಂಸ್ಥೆಯ ಕೇಸ್ನಲ್ಲಿ ಜಾರಿಯಾಗುವ ನಾನ್ ಬೇಲಬಲ್ ವಾರೆಂಟ್ ಬಗ್ಗೆ ಅವರು ಕೊಟ್ಟಿರೋ ಉತ್ತರ ಇದು.
ಆಗ ನಾವು ಸಿನಿಮಾ ರಿಲೀಸ್ ಆಗುವ 1 ತಿಂಗಳು ಮೊದಲು ಹಾಡು ರಿಲೀಸ್ ಮಾಡಿದ್ದೆವು. ಅವರು ಸಿನಿಮಾ ರಿಲೀಸ್ ಆಗೋಕೆ ಸ್ಟೇ ತರಲು ಹೋಗಿದ್ದರು. ನಮಗೆ ಅದರ ಸೂಚನೆಯಿದ್ದ ಕಾರಣ, ಆ ಹಾಡು ಇಲ್ಲದ ಇನ್ನೊಂದು ಪ್ರತಿಯನ್ನೂ ಇಟ್ಟುಕೊಂಡಿದ್ದೆವು. ಕೋರ್ಟ್ನಲ್ಲಿ ಇತ್ಯರ್ಥವಾಗುವವರೆಗೂ ಆ ಹಾಡನ್ನು ಚಿತ್ರದಲ್ಲಿ ಬಳಸಿರಲಿಲ್ಲ. ಲಾಕ್ ಡೌನ್ಗೆ ಮುನ್ನ ಅವರು ಇನ್ನೊಂದು ರೀತಿ ಕೇಸ್ ಹಾಕಿದ್ರು. ಅದನ್ನು ರಕ್ಷಿತ್ ಶೆಟ್ಟಿ ಫಾಲೋ ಮಾಡ್ತಿದ್ದಾನೆ. ಅವನೇ ಇವರಿಗೆ ಉತ್ತರ ಕೊಡ್ತಾನೆ. ಅವರು ಹಿಂದೆ ಕಳುಹಿಸಿದ್ದ ಪತ್ರ ಹಳೆಯ ಅಡ್ರೆಸ್ಗೆ ಹೋಗಿತ್ತು. ನಮಗೆ ಸಿಕ್ಕಿರಲಿಲ್ಲ. ಈಗ ರಕ್ಷಿತ್ ಶೆಟ್ಟಿಗೂ ನೋಟಿಸ್ ಸಿಕ್ಕಿದೆ. ಆತನೇ ಇವರಿಗೆಲ್ಲ ಉತ್ತರ ಕೊಡ್ತಾನೆ ಎಂದು ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.
ರಿಲೀಸ್ ಟೈಂನಲ್ಲಿ ಸಿನಿಮಾ ರಿಲೀಸ್ ಆಗೋಕೆ ಬಿಡಲ್ಲ. ಕೋರ್ಟ್ನಿಂದ ಕೋರ್ಟಿಗೆ ಅಲೆದಾಡಿಸುತ್ತೇವೆ ಎಂದೆಲ್ಲ ಲಹರಿ ಸಂಸ್ಥೆ ಬೆದರಿಕೆ ಹಾಕಿತ್ತು. ಇನ್ನೊಂದು ಹಂತದಲ್ಲಿ ಪ್ರಶಾಂತ್ ಸಂಬರಗಿ ಅವರೇ ಇಷ್ಟು ಹಣ ಕೊಟ್ಟುಬಿಡಿ, ಕೇಸ್ ಇತ್ಯರ್ಥ ಮಾಡಿಕೊಳ್ಳೋಣ ಎಂದಿದ್ದರು. ನಾವು ಜಗ್ಗಲೂ ಇಲ್ಲ. ಬಗ್ಗಲೂ ಇಲ್ಲ. ಇದನ್ನು ಕೋರ್ಟ್ನಲ್ಲಿಯೇ ಎದುರಿಸುತ್ತೇವೆ ಎಂದಿದ್ದಾರೆ ರಿಷಬ್ ಶೆಟ್ಟಿ.
ಶಾಂತಿ ಕ್ರಾಂತಿಯ ಆ ಹಾಡಿನಲ್ಲಿ ಬಳಸಿದ್ದ ಸಂಗೀತ ಪರಿಕರಗಳನ್ನೇ ಈ ಹಾಡಿನಲ್ಲಿ ಬಳಸಿದ್ದೆವು. ಆ ಹಾಡನ್ನು ಹಂಸಲೇಖ ಮತ್ತು ರವಿಚಂದ್ರನ್ ಸರ್ಗೆ ಡೆಡಿಕೇಟ್ ಮಾಡುವ ಉದ್ದೇಶವಿತ್ತು. ಆದರೆ, ಈ ವಿವಾದ ಸೃಷ್ಟಿಯಾದ ಕಾರಣ, ಅದನ್ನು ಕೈಬಿಟ್ಟೆವು ಎಂಬ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ ರಿಷಬ್ ಶೆಟ್ಟಿ.