ಸಿನಿಮಾಗಳು ಮುಗಿದು ಸಿದ್ಧವಾದ ಮೇಲೆ ಸೆನ್ಸಾರ್ ಆಗಬೇಕು. ಎ, ಯು ಅಥವಾ ಯು/ಎ ಸರ್ಟಿಫಿಕೇಟ್ ಕೊಡೊದು ಸೆನ್ಸಾರ್ ಮಂಡಳಿ ಜವಾಬ್ದಾರಿ. ಇದನ್ನು ಹೊರತಾಗಿ ಎಸ್ ಅನ್ನೋ ಸರ್ಟಿಫಿಕೇಟ್ ಕೂಡಾ ಇದೆ. ಸೈಂಟಿಫಿಕ್ ಚಿತ್ರಗಳಿಗೆ ಇದು ಅನ್ವಯ. ಚಿತ್ರಗಳಲ್ಲಿ ಆಕ್ಷೇಪಾರ್ಹ ದೃಶ್ಯ, ಸಂಭಾಷಣೆ, ದೃಶ್ಯಗಳಿದ್ದರೆ ಇದುವರೆಗೆ ಸೆನ್ಸಾರ್ ಮಂಡಳಿ (ಸಿಬಿಎಫ್ಸಿ) ಕಟ್ ಅಥವಾ ಮ್ಯೂಟ್ ಮಾಡಲು ಸೂಚಿಸುತ್ತಿತ್ತು. ಅದನ್ನು ಒಪ್ಪದೇ ಹೋದರೆ ಚಿತ್ರದವರು ಟ್ರಿಬ್ಯುನಲ್ಗೆ (ಎಫ್ಸಿಎಟಿ) ಹೋಗೋಕೆ ಅವಕಾಶವಿತ್ತು. ಅಲ್ಲಿಯೂ ಆಗದೇ ಹೋದರೆ ನ್ಯಾಯಾಲಯದ ಬಾಗಿಲು ಓಪನ್ ಇರುತ್ತಿತ್ತು. ಆದರೆ, ಇನ್ನು ಮುಂದೆ ಟ್ರಿಬ್ಯುನಲ್ ಇರುವುದೇ ಇಲ್ಲ. ನ್ಯಾಯಾಲಯ ಮಾತ್ರ.
ಕೇಂದ್ರ ಸರ್ಕಾರದ ಹೊಸ ಕಾನೂನಿಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಟ್ರಿಬ್ಯುನಲ್ ಅಗತ್ಯವೇ ಇರಲಿಲ್ಲ. ಅದು ವಿವಾದಗಳನ್ನೇನೂ ಪರಿಹರಿಸುತ್ತಿರಲಿಲ್ಲ ಎನ್ನುವ ವಾದ ಕೆಲವರದ್ದಾದರೆ, ಪ್ರತಿಯೊಂದಕ್ಕೂ ಕೋರ್ಟ್ಗೆ ಹೋಗಬೇಕು ಎಂದರೆ ಸೆನ್ಸಾರ್ ಬೋರ್ಡ್ ಅಗತ್ಯವಾದರೂ ಏನು..? ಕೋರ್ಟುಗಳಲ್ಲಿ ಕೆಲಸಗಳು ವೇಗವಾಗಿ ಆಗುವುದಿಲ್ಲ. ಇದು ಚಿತ್ರರಂಗದ ಪಾಲಿಗೆ ಮರಣಶಾಸನ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.