ಕೋವಿಡ್ 19 ಬಿಕ್ಕಟ್ಟು ಮತ್ತೊಮ್ಮೆ ಶುರುವಾಗಿದೆ. ಎಂದಿನಂತೆ ಸರ್ಕಾರ ಈ ಬಾರಿಯೂ ಚಿತ್ರರಂಗಕ್ಕೇ ಮೊದಲ ಕೆಂಗಣ್ಣು ಬೀರಿದೆ. ಚಿತ್ರಮಂದಿರಗಳಲ್ಲಿ ನಾಳೆಯಿಂದ 50:50 ರೂಲ್ಸ್ ಜಾರಿಯಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಕಂಪ್ಲೀಟ್ ಬಂದ್ ಆಗಿವೆ.
ಮಹಾರಾಷ್ಟ್ರದಲ್ಲೀಗ ವೀಕೆಂಡ್ ಲಾಕ್ ಡೌನ್ ಜಾರಿಯಾಗಿದೆ. ರಾತ್ರಿ 8 ಗಂಟೆಯಿಂದಲೇ ನೈಟ್ ಕಫ್ರ್ಯೂ ಶುರುವಾಗಿದೆ. ಹೀಗಾಗಿ ಮೊದಲ ಏಟು ಚಿತ್ರಮಂದಿರಗಳಿಗೇ ಬಿದ್ದಿದೆ. ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸುಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ನೋ ಪ್ರಾಬ್ಲಂ ಎಂಬ ನಂಬಿಕೆ ಮೇಲೆ ರಿಲೀಸ್ ಆಗಿದ್ದ 14 ಸಿನಿಮಾಗಳು ನೆಲಕಚ್ಚಿವೆ.
ಇನ್ನು ಚಿತ್ರೀಕರಣಕ್ಕೂ ಹೊಸ ರೂಲ್ಸ್ ಜಾರಿಯಾಗಿದೆ. ಚಿತ್ರೀಕರಣಗಳಲ್ಲಿ ಭಾಗವಹಿಸುವವರು ಪ್ರತಿ 15 ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಬೇಕು. ನೆಗೆಟಿವ್ ರಿಪೋರ್ಟ್ ಇರಲೇಬೇಕು. ಈ ರೂಲ್ಸ್ ಏಪ್ರಿಲ್ 30ರವರೆಗೂ ಜಾರಿಯಲ್ಲಿರಲಿದೆ.
ಇತ್ತೀಚೆಗೆ ಅಮೀರ್ ಖಾನ್, ಅಕ್ಷಯ್ ಕುಮಾರ್, ಗೋವಿಂದ, ವಿಕ್ಕಿ ಕೌಶಲ್, ಅಲಿಯಾ ಭಟ್, ಭೂಮಿ ಪಡ್ನೆಕರ್ ಸೇರಿದಂತೆ ಹಲವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೊಸ ರೂಲ್ಸ್ ಜಾರಿಯಾಗಿದೆ. ಇದು ಕನ್ನಡ ಚಿತ್ರರಂಗಕ್ಕೂ ಎಚ್ಚರಿಕೆ ಗಂಟೆ.