ಏಪ್ರಿಲ್ 1ನೇ ತಾರೀಕು ಯುವರತ್ನ ರಿಲೀಸ್ ಆಗಿತ್ತು. ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಚಿತ್ರದ ಬಗ್ಗೆ ಪ್ರೇಕ್ಷಕರೇ ಮತ್ತೊಬ್ಬರಿಗೆ ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ಪ್ರಮೋಟ್ ಮಾಡುತ್ತಿದ್ದರು. ಇಷ್ಟು ಬೇಗ ಮೌತ್ ಪಬ್ಲಿಸಿಟಿ ಪಡೆದ ಚಿತ್ರ ಯುವರತ್ನ. ಆದರೆ, 2ನೇ ದಿನ ಸಂಜೆ ಫೇಸ್ಬುಕ್ ಲೈವ್ನಲ್ಲಿ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಕುಳಿತಿದ್ದ ಪುನೀತ್ ಮತ್ತು ಸಂತೋಷ್ ಆನಂದರಾಮ್ ಅವರಿಗೆ ಶಾಕ್ ಕೊಟ್ಟಿತ್ತು ರಾಜ್ಯ ಸರ್ಕಾರ. ದಿಢೀರನೇ ಆದೇಶ ಹೊರ ಬಂದಿತ್ತು. ವೀಕೆಂಡ್ ಬಾಕ್ಸಾಫೀಸ್ ನೋಡುವ ಅವಕಾಶವನ್ನೂ ಕೊಡಲಿಲ್ಲ ರಾಜ್ಯ ಸರ್ಕಾರ. ಎಲ್ಲವೂ ಸಡನ್ ಶಾಕ್. ಇಷ್ಟಕ್ಕೂ ಸರ್ಕಾರದ ಈ ನಿರ್ಧಾರದ ವಿರುದ್ಧ ಚಿತ್ರರಂಗ ಕೆರಳಿ ನಿಲ್ಲಲು ಕಾರಣವೂ ಇತ್ತು.
ಇಂಥಾದ್ದೊಂದು ನಿರ್ಧಾರ ಹೊರಬೀಳುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಫಿಲಂ ಚೇಂಬರ್ ಹಾಗೂ ಯುವರತ್ನ ಚಿತ್ರತಂಡದವರು ಹಲವು ಬಾರಿ ಸರ್ಕಾರವನ್ನು ಸಂಪರ್ಕಿಸಿದ್ದರು. ನಿರ್ಧಾರ ಹೊರಬಿದ್ದ ದಿನ ಮಧ್ಯಾಹ್ನ ಕೂಡಾ ಸರ್ಕಾರ ಅಂತಾದ್ದೊಂದು ಆಲೋಚನೆ ಕೂಡಾ ನಮ್ಮಲ್ಲಿ ಇಲ್ಲ ಎಂದೇ ಸ್ಪಷ್ಟಪಡಿಸಿತ್ತು.
ಅಂತಾದ್ದೊಂದು ನಿರ್ಣಯ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರ ಸೌಜನ್ಯಕ್ಕೂ ಸಿನಿಮಾ ಕ್ಷೇತ್ರದವರಿಗೆ ತಿಳಿಸಿರಲಿಲ್ಲ. ಅಭಿಪ್ರಾಯವನ್ನೂ ಕೇಳಿರಲಿಲ್ಲ.
ಫಿಲಂ ಚೇಂಬರ್ ಸೇರಿದಂತೆ ಚಿತ್ರರಂಗದ ಪ್ರತಿ ಸಂಘಟನೆಗೂ ವಿಷಯ ಗೊತ್ತಾಗಿದ್ದೇ ಟಿವಿ ಚಾನೆಲ್ಲುಗಳಲ್ಲಿ ಬ್ರೇಕಿಂಗ್ ನ್ಯೂಸ್ ಹೊರಬಿದ್ದ ಮೇಲೆ. ಯುವರತ್ನ ಚಿತ್ರತಂಡಕ್ಕೂ ಇದರ ಬಗ್ಗೆ ಸಣ್ಣ ಮಾಹಿತಿ ಇರಲಿಲ್ಲ.
ಹಾಗಾದರೆ ಸರ್ಕಾರದಲ್ಲಿದ್ದ ಪ್ರಭಾವಿ ನಾಯಕರು ಯಾರಾದರೂ ಬೇಕೆಂದೇ ಚಿತ್ರತಂಡದ ವಿರುದ್ಧ ಪಿತೂರಿ ಮಾಡಿದರಾ..? ಯುವರತ್ನ ಚಿತ್ರವನ್ನು ಸೋಲಿಸಲೆಂದೇ ಬಿಡುಗಡೆಯಾಗುವವರೆಗೂ ಕಾದು ಒಂದು ದಿನ ಕಳೆದ ಕೂಡಲೇ 50% ನಿರ್ಬಂಧ ಹೇರಿದರಾ..? ಇಂಥಾದ್ದೊಂದು ಪ್ರಶ್ನೆಯನ್ನು ಅಭಿಮಾನಿಗಳಷ್ಟೇ
ಅಲ್ಲ, ಚೇಂಬರ್ನ ಸದಸ್ಯರೂ ಎತ್ತಿದರು. ಆದರೆ, ಇದು ಫಿಲಂ ಚೇಂಬರ್ ಅಧಿಕೃತ ಅಭಿಪ್ರಾಯ ಅಲ್ಲ. ಸರ್ಕಾರ ಈ ಕುರಿತು ಸ್ಪಷ್ಟೀಕರಣ ನೀಡಬೇಕು. ದಯವಿಟ್ಟು ಇಂತಾ ಕೆಲಸ ಮಾಡಬೇಡಿ ಎಂದು ಮನವಿಯನ್ನೂ ಮಾಡಿದರು. ಆದರೆ.. ಅನುಮಾನಗಳಿಗೆ ಉತ್ತರ ಕೊಡಬೇಕಾದ ಸರ್ಕಾರ ಈ ಕ್ಷಣದವರೆಗೂ ಉತ್ತರ ಕೊಟ್ಟಿಲ್ಲ. ಚೇಂಬರ್ನವರು ಕೊಟ್ಟ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆಯೇನೋ ಸಿಕ್ಕಿದೆ. ಆದರೆ.. ಯುವರತ್ನ ಚಿತ್ರ ರಿಲೀಸ್ ಆದ ನಂತರ ಸಿಕ್ಕಿದ್ದ ಒಂದು ಗೋಲ್ಡನ್ ವೀಕ್ ಕಳೆದುಹೋಗಿದೆ. ಇದೆಲ್ಲದರ ನಡುವೆಯೂ ಇರುವ ಕಾನ್ಫಿಡೆನ್ಸ್ ಒಂದೇ. ಚಿತ್ರಕ್ಕೆ ಸಿಕ್ಕಿರುವ ಪಾಸಿಟಿವ್ ರೆಸ್ಪಾನ್ಸ್. ಏಕೆಂದರೆ.. ಈಗ ಈ ಚಿತ್ರವನ್ನು ಗೆಲ್ಲಿಸೋಕೆ ಚಿತ್ರರಸಿಕರೇ ನಿಂತಿದ್ದಾರೆ.ಏಕೆಂದರೆ ಈಗ 100% ಪ್ರೇಕ್ಷಕರ ಭರ್ತಿಗೆ ಸರ್ಕಾರ ಓಕೆ ಎಂದಿದೆ.ಚಿತ್ರ ರಸಿಕರ ಹೋರಾಟ ಗೆಲ್ಲಲಿ.