ಯುವರತ್ನ ರಿಲೀಸ್ ಆಗಿ ಎರಡು ದಿನವೂ ಮುಗಿದಿರಲಿಲ್ಲ. ಏಪ್ರಿಲ್ 1ಕ್ಕೆ ಸಿನಿಮಾ ರಿಲೀಸ್ ಆಗಿತ್ತು. ಪ್ರೇಕ್ಷಕರ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿದವರೇ ಇದು ಪ್ರತಿಯೊಬ್ಬರೂ ತಮ್ಮ ಕುಟುಂಬ, ಮಕ್ಕಳೊಂದಿಗೆ ನೋಡಲೇಬೇಕಾದ ಸಿನಿಮಾ ಎಂದು ಪ್ರಚಾರಕ್ಕಿಳಿದುಬಿಟ್ಟಿದ್ದರು. ಮೌತ್‍ಪೀಸ್ ಕ್ಯಾಂಪೇನ್ ಶುರುವಾಗಿತ್ತು. ಇದನ್ನೆಲ್ಲ ನೋಡಿ ಖುಷಿಯಾದ ಪುನೀತ್ ಮತ್ತು ಸಂತೋಷ್ ಆನಂದರಾಜ್ ಒಟ್ಟಿಗೇ ಫೇಸ್‍ಬುಕ್ ಲೈವ್‍ನಲ್ಲಿ ಕುಳಿತಿದ್ದಾಗಲೇ ದಿಢೀರನೆ ಬರಸಿಡಿಲಿನಂತೆ ಎರಗಿದ ಸುದ್ದಿ ಥಿಯೇಟರುಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಎನ್ನುವುದು.
ಕಟ್ಟಕಡೆಯ ಕ್ಷಣದವರೆಗೂ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದವರಿಗೆ ಲಾಕ್ ಡೌನ್ ಇಲ್ಲ. ಸೆಮಿ ಲಾಕ್ ಡೌನ್ ಇಲ್ಲ. ನೈಟ್ ಕಫ್ರ್ಯೂ ಇಲ್ಲ. ಯಾವುದೇ ನಿರ್ಬಂಧದ ಆದೇಶಗಳೂ ಇಲ್ಲ. ಡೋಂಟ್ ವರಿ ಎಂದೇ ಹೇಳಿಕೊಂಡು ಬಂದಿತ್ತು ಸರ್ಕಾರ. ಸಿಎಂ ಅಧಿಕೃತ ಟ್ವಿಟರ್ ಖಾತೆಯಲ್ಲೂ ಇದೇ ಸಂದೇಶವಿತ್ತು. ಇದೇ ಧೈರ್ಯದ ಮೇಲೆ ರಿಲೀಸ್ ಮಾಡಿದ ಚಿತ್ರಕ್ಕೆ ಸರ್ಕಾರ ಅನಿರೀಕ್ಷಿತ ಪೆಟ್ಟು ಕೊಟ್ಟಿದೆ. ಇದರಿಂದ ಶಾಕ್‍ಗೆ ಒಳಗಾಗಿರುವ ಚಿತ್ರತಂಡ ಸರ್ಕಾರ ತನ್ನ ನಿರ್ಧಾರವನ್ನು ಪುನರ್‍ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.
ಮಾರ್ಚ್ 31ರ ರಾತ್ರಿ ಗೊತ್ತಾಗಿದ್ದರೂ ಸಿನಿಮಾ ರಿಲೀಸ್ ಮಾಡ್ತಾ ಇರಲಿಲ್ಲ. ದಯವಿಟ್ಟು ಈ ನಿರ್ಧಾರ ವಾಪಸ್ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ ಪುನೀತ್.
ಜನ ಎಲ್ಲ ಮುಂಜಾಗ್ರತೆ ವಹಿಸುತ್ತಿದ್ದಾರೆ. ನಿಯಮ ಪಾಲನೆ ಮಾಡುತ್ತಿದ್ದಾರೆ. ಥಿಯೇಟರುಗಳಲ್ಲಿ ಮಾಸ್ಕ್, ಸ್ಯಾನಿಟೈಸೇಷನ್, ಅಂತರ ಎಲ್ಲವನ್ನೂ ಕಾಪಾಡಿಕೊಳ್ಳುತ್ತಿದ್ದೇವೆ. ಸರ್ಕಾರ ದಯವಿಟ್ಟು ಈ 50% ನಿರ್ಬಂಧವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ ಪುನೀತ್ ರಾಜ್‍ಕುಮಾರ್.
ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ್ ಕಿರಗಂದೂರು.. ಅಷ್ಟೇ ಏಕೆ ಚಿತ್ರ ನೋಡಿದ ಪ್ರೇಕ್ಷಕರೂ ಸೇರಿದಂತೆ ಎಲ್ಲರೂ ಇದು ಸರಿಯಾದ ನಿರ್ಧಾರ ಅಲ್ಲ. ದಯವಿಟ್ಟು ಈ ನಿರ್ಬಂಧ ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.