ವಿಷ್ಣುವರ್ಧನ್ ಓದಿದ ಶಾಲೆ ಎಂಬ ಖ್ಯಾತಿ ಚಾಮರಾಜಪೇಟೆಯಲ್ಲಿರುವ ಮಾಡೆಲ್ ಹೈಸ್ಕೂಲ್‍ಗೆ ಇದೆ. ಇದು ವಿಷ್ಣು ಓದಿದ ಶಾಲೆ ಎಂಬಷ್ಟಕ್ಕೇ ಸೀಮಿತವಾಗಿಲ್ಲ, ಇದು ಕರ್ನಾಟಕದಲ್ಲಿರುವ 150 ವರ್ಷಗಳ ಇತಿಹಾಸ ಹೊಂದಿರುವ ಶಾಲೆ. ಬೆಂಗಳೂರಿನ ಮೊತ್ತ ಮೊದಲ ಕನ್ನಡ ಮಾಧ್ಯಮದ ಶಾಲೆ. 1870ರಲ್ಲಿ ಬ್ರಿಟಿಷರ ಕಾಲದಲ್ಲಿ ಶುರುವಾದ ಶಾಲೆಯಿದು. ವಿಪರ್ಯಾಸವೆಂದರೆ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿರೋ ಈ ಶಾಲೆಗೆ ಕಳೆದ 3 ವರ್ಷಗಳಿಂದ ಒಬ್ಬನೇ ಒಬ್ಬ ವಿದ್ಯಾರ್ಥಿ ಹಾಜರಾಗಿಲ್ಲ. ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯೀಗ ಮುಚ್ಚುವ ಸ್ಥಿತಿಗೆ ತಲುಪಿದ್ದು, ಬಾಗಿಲು ಹಾಕಲು ಸರ್ಕಾರವೂ ಒಂದು ಹೆಜ್ಜೆ ಮುಂದಿಟ್ಟಿದೆ.
ಶಾಲೆಯ ಪೀಠೋಪಕರಣಗಳು ಮುರಿದು ಹೋಗಿದ್ದು, ಕಟ್ಟಡವೂ ಅಷ್ಟೆ, ಪಾಳು ಬಿದ್ದ ಸ್ಥಿತಿಗೆ ತಲುಪುತ್ತಿದೆ. ವಿಷ್ಣುವರ್ಧನ್ ಅವರಷ್ಟೇ ಅಲ್ಲ, ಕರ್ನಾಟಕ ಕ್ರಿಕೆಟ್‍ನ ದಂತಕತೆ ಜಿ.ಆರ್.ವಿಶ್ವನಾಥ್ ಅವರು ಓದಿದ್ದು ಕೂಡಾ ಇದೇ ಶಾಲೆಯಲ್ಲಿ. ಅಂದಹಾಗೆ ಈ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಸಿಎಂ ಆಗಿದ್ದಾಗ ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದರು. ಆದರೆ, ಹೇಳಿದಂತೆ ನಡೆದುಕೊಳ್ಳಲಿಲ್ಲ. 2017ರಲ್ಲಿ ಹೈಯರ್ ಸೆಕೆಂಡರಿ ಸ್ಕೂಲ್ ಮುಚ್ಚಿದರೆ, 2018ರಲ್ಲಿ ಪ್ರೈಮರಿ ಸ್ಕೂಲ್ ಕೂಡಾ ಮುಚ್ಚಿ ಹೋಯ್ತು. ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ, ಕಳಕಳಿ, ಜಾಗೃತಿ, ಲೈಕು, ಕಮೆಂಟುಗಳಾದಾಗ ಎಲ್ಲರಿಗೂ ನೆನಪಾಗುವ ಶಾಲೆ ಇದು.
ಈಗ ಇದು ಸುದ್ದಿಯಾಗೋಕೆ ಕಾರಣ ಇಷ್ಟೆ, ನಟಿ ಪ್ರಣೀತಾ ಸುಭಾಷ್ ಸರ್ಕಾರ ಈ ಶಾಲೆಯನ್ನು ಪುನಃ ತೆರೆಯಬೇಕು. ಶಾಲೆಯ ಆರಂಭಕ್ಕೆ ಸರ್ಕಾರ ಮನಸ್ಸು ಮಾಡಿದರೆ ನಾವು ನಮ್ಮ ಪ್ರಣೀತಾ ಫೌಂಡೇಷನ್‍ನಿಂದ ಸಾಧ್ಯವಾದಷ್ಟೂ ನೆರವು ನೀಡುತ್ತೇವೆ. ಈ ಶಾಲೆಯನ್ನು ನಾವೆಲ್ಲರೂ ಉಳಿಸಿಕೊಳ್ಳೋಣ ಎಂದು ಸಿಎಂ ಅವರಿಗೆ ಟ್ವೀಟ್ ಮಾಡಿದ್ದಾರೆ. ಪ್ರಣೀತಾ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಕೂಡಾ ಈ ಶಾಲೆಯನ್ನು ರಕ್ಷಿಸಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ.