ಹೊಂಬಾಳೆ ಫಿಲಮ್ಸ್, ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ. ಕನ್ನಡ ಚಲನಚಿತ್ರ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಷ್ಠಿತ ಹೊಂಬಾಳೆ ಸಮೂಹ, ತನ್ನ ಗ್ರೂಪ್ನ ಎಲ್ಲ ಉದ್ಯೋಗಿಗಳು, ನೌಕರರು ಹಾಗೂ ಅವರ ಕುಟುಂಬಗಳ ಸುಮಾರು 5 ಸಾವಿರ ಮಂದಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಿಸಲು ನಿರ್ಧರಿಸಿದೆ. ತನ್ನೊಂದಿಗೆ ಇರುವ ಪ್ರತಿಯೊಬ್ಬರ ಕಾಳಜಿ, ಆರೈಕೆ ನನ್ನ ಹೊಣೆ ಎಂದಿರುವ ಹೊಂಬಾಳೆ ಗ್ರೂಪ್ಸ್, ಸಮೂಹದ ಎಲ್ಲರ ವ್ಯಾಕ್ಸಿನೇಶನ್‌ಗೆ ಆಗುವ ಪೂರ್ಣ ವೆಚ್ಚವನ್ನು ತಾನೇ ಭರಿಸಲಿದೆ.
ಇದು, ಹೊಂಬಾಳೆ ಫಿಲ್ಮ್ ಬ್ಯಾನರ್‌ನಲ್ಲಿರುವ ಎಲ್ಲ ಸದಸ್ಯರು ಹಾಗೂ ಪೂರಕ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೂ ಸಿಗಲಿದೆ. ಕೇಂದ್ರ ಸರಕಾರ ಮಾರ್ಗಸೂಚಿಯಂತೆ ಮುಂದಿನ ಹಂತದಲ್ಲಿ ಅವರವರ ವಯೋಮಿತಿ ಆಧಾರದ ಮೇಲೆ ಕೋವಿಡ್ ವ್ಯಾಕ್ಸಿನ್ ಕೊಡಿಸಲಾಗುವುದು ಮತ್ತು ನಮ್ಮವರ ಆರೋಗ್ಯದ ಜತೆಗೆ ಅವರ ಕುಟುಂಬದ ಆರೋಗ್ಯವೂ ನಮಗೆ ಮುಖ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.