ಯುವರತ್ನ ಚಿತ್ರದ ಪ್ರೀ-ಇವೆಂಟ್ ಕಾರ್ಯಕ್ರಮಕ್ಕೆ ಕೊರೊನಾ ಅಡ್ಡಿಯಾಗುತ್ತಿದೆ. ದೊಡ್ಡ ದೊಡ್ಡ ಸಮಾರಂಭ ಮಾಡುವುದಕ್ಕೂ ಕೊರೊನಾ ರೂಲ್ಸ್ ಅವಕಾಶ ಕೊಡುತ್ತಿಲ್ಲ. ಹೀಗಿರುವಾಗ ಯುವರತ್ನ ಟೀಂ ಆರಿಸಿಕೊಂಡಿದ್ದು ಅಭಿಮಾನಿಗಳ ಬಳಿಗೇ ಹೋಗುವ ಹೆಜ್ಜೆ. ಆಗ ಹೊರಟ ಯುವರತ್ನ ತೇರು ಈಗ 3 ಜಿಲ್ಲೆಗಳನ್ನು ಮುಗಿಸಿದೆ.
ಕಲಬುರಗಿ, ಧಾರವಾಡ ಮತ್ತು ಬೆಳಗಾವಿಗಳಲ್ಲಿ ಯುವರತ್ನ ಚಿತ್ರದ ಪ್ರಮೋಷನ್ ಮಾಡಲಾಗಿದೆ. ಈ ತೇರಿನ ಮುಂದೆ ಪುನೀತ್ ಇದ್ದರೆ, ಜೊತೆಯಲ್ಲಿ ಡಾಲಿ ಧನಂಜಯ್, ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ರವಿಶಂಕರ್ ಗೌಡ.. ಹೀಗೆ ಯುವರತ್ನ ಚಿತ್ರದ ಅರ್ಧಕ್ಕರ್ಧ ಟೀಂ ಯಾತ್ರೆಗೆ ಹೋಗಿತ್ತು.
ಸುಡು ಸುಡು ಬಿಸಿಲು.. ಮಟ ಮಟ ಮಧ್ಯಾಹ್ನ.. ಇದರ ನಡುವೆ ತುಂತುರು ತುಂತುತು ಮಳೆ.. ಸೆಕೆ.. ಧಗೆ.. ಯಾವುದೂ ಅಭಿಮಾನಿಗಳಿಗೆ ಅಡ್ಡಿಯಾಗಲಿಲ್ಲ.
ಅಪ್ಪುಗೆ ಜೈಜೈಕಾರ ಹಾಕುತ್ತಲೇ ಹೋದರು ಫ್ಯಾನ್ಸ್. ಅಭಿಮಾನಿಗಳಿಗಾಗಿ ಹಾಡು ಹಾಡಿ, ಡೈಲಾಗ್ ಹೊಡೆದು ರಂಜಿಸಿದ ಪುನೀತ್, ಸಿನಿಮಾ ನೊಡೋದನ್ನು ಮರೆಯಬೇಡಿ. ಮಾಸ್ಕ್, ಅಂತರ ಕಾಯ್ದುಕೊಂಡು ಸೇಫ್ ಆಗಿರಿ ಎಂದು ಸಂದೇಶ ನೀಡಿದರು.