ರಾಬರ್ಟ್ ಚಿತ್ರ ಸೂಪರ್ ಸಕ್ಸಸ್ ಆಗಿದೆ. ದರ್ಶನ್ ವೃತ್ತಿ ಜೀವನದ ಇನ್ನೊಂದು ಭರ್ಜರಿ ಸಕ್ಸಸ್ ಸಿನಿಮಾ ಇದು. ಈ ಸಿನಿಮಾದ ಯಶಸ್ಸನ್ನು ನಿರ್ಮಾಪಕರಿಗೆ ಅರ್ಪಿಸಿದ ದರ್ಶನ್ ನಿರ್ಮಾಪಕರಿಗೆ ಹೇಳಿದ್ದು ಹಾಲು ಕರೆಯುವ ಕಥೆ.
``ನಾನು ಮೊದಲು ಒಂದು ಎಮ್ಮೆ ತಗೊಂಡೆ. ಅದು 12 ಲೀಟರ್ ಹಾಲು ಕೊಡುತ್ತಿತ್ತು. ಹಾಲು ಕರೆಯುವವನು ವಾರದಲ್ಲಿ 3 ದಿನ ಬಂದರೆ 4 ದಿನ ಕೈಕೊಡುತ್ತಿದ್ದ. ಕೊನೆಗೆ ಬೇಸತ್ತು ನಾನೇ ಒಂದು ದಿನ ಟ್ರೈ ಮಾಡಿದೆ. ಮೊದಲ ದಿನ ನನಗೆ 12 ಲೀಟರ್ ಕರೆಯೋಕೆ ಆಗಲಿಲ್ಲ. 8 ಲೀಟರ್ ಮಾತ್ರ ಕರೆದೆ. ಆಮೇಲೆ ಟ್ರೈ ಮಾಡ್ತಾ ಹೋದೆ. ಹೋಗ್ತಾ ಹೋಗ್ತಾ ಇನ್ನೂ ಹೆಚ್ಚು ಹಾಲು ಕರೆದೆ. ರಾಬರ್ಟ್‍ನಲ್ಲಿ ಆಗಿದ್ದೂ ಅದೇ'' ಎಂದಿದ್ದಾರೆ ದರ್ಶನ್. ಇಷ್ಟಕ್ಕೂ ರಾಬರ್ಟ್‍ನಲ್ಲಿ ಆಗಿದ್ದೇನು..? ಹಾಲು ಕರೆಯೋ ಕಥೆ ಹೇಳಿದ್ದೇಕೆ..? ಆಗಿದ್ದು ಇಷ್ಟೆ..
ನಿರ್ಮಾಪಕ ಉಮಾಪತಿ ಚಿತ್ರವನ್ನು ಅಚ್ಚುಕಟ್ಟಾಗಿ ರೀಚ್ ಮಾಡಿಸಿದ್ರು. ಡಿಸ್ಟ್ರಿಬ್ಯೂಷನ್‍ನ್ನು ಅದ್ಭುತವಾಗಿ ನಿರ್ವಹಿಸಿದ್ರು. ನಾನು ಹೇಳೋದಿಷ್ಟೆ, ನನ್ನ ಚಿತ್ರವನ್ನು ಸರಿಯಾಗಿ ರೀಚ್ ಮಾಡಿಸುವ ಶಕ್ತಿ ಇದ್ದರೆ ಮಾತ್ರ ಬನ್ನಿ. ಇಲ್ಲದಿದ್ರೆ ಬೇಡವೇ ಬೇಡ. ಆರಂಭದಲ್ಲಿ ಎಲ್ಲರಿಗೂ ಅಡೆತಡೆಗಳಾಗುತ್ತವೆ. ಹಾಗಂತ ಬಿಟ್ಟರೆ ಗೆಲ್ಲೋಕೆ ಸಾಧ್ಯನಾ..? ನಾವು ನಮ್ಮವರಿಗೆ ಆಫರ್ ಕೊಡೋಣ. 53 ಸಿನಿಮಾ ಆದಮೇಲೆ ನಾನೊಂದು ಪಾಠ ಕಲಿತಿದ್ದೇನೆ. ಡಿಸ್ಟ್ರಿಬ್ಯೂಟರುಗಳನ್ನು ಸರಿಯಾಗಿ ಹಿಡಿದುಕೊಳ್ಳಬೇಕು. ಇಲ್ಲದೇ ಹೋದರೆ ಎಸಿ ರೂಂನಲ್ಲಿ ಕುಳಿತುಕೊಂಡು ಕೋಟಿ ಕೋಟಿ ಹೊಡ್ಕೊಳ್ತಾರೆ ಎಂದಿದ್ದಾರೆ ದರ್ಶನ್.